Print

(ಡಿಸೆಂಬರ್ 20 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಕನ್ನಡ ಸಾಹಿತಿ ಕುಂ. ವೀರಭದ್ರಪ್ಪ ಮಾಡಿದ ಉದ್ಘಾಟನಾ ಭಾಷಣ)

ಕುಡ್ಲ ಎಂದೇ ಜನ-ಸಾಮಾನ್ಯರಿಂದ ಕರೆಸಿಕೊಳ್ಳುತ್ತಿರುವ ಮಂಗಳೂರು ನನ್ನಂಥ ಲೇಖಕರ ಪ್ರೀತಿಯ ಶಹರ. ಕನ್ನಡ ಸಾಹಿತ್ಯವನ್ನು ಶ್ರೀಮಂತ ಹತ್ತಾರು ಮಹನೀಯರಿಗೆ ಈ ಪ್ರದೇಶ ಆಶ್ರಯ ನೀಡಿದೆ.


ಶತಶತಮಾನಗಳ ಹಿಂದೆ ವಿದೇಶಿ ಪ್ರವಾಸಿಗರು ಈ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ. ಅವರೆಲ್ಲ ಈ ಸುಂದರ ಪ್ರದೇಶವನ್ನು ತಮ್ಮ ಪ್ರವಾಸ ಕಥನಗಳಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇಲ್ಲಿನ ತುಳು ಕೊಂಕಣಿ ಭಾಷಿಗರು ಕನ್ನಡನಾಡಿನ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸುತ್ತಲೇ ಇದ್ದಾರೆ, ಈ ನೈಸರ್ಗಿಕ ಸುಂದರ ಪ್ರದೇಶ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಹತ್ತು ಹಲವು ಬುಡಕಟ್ಟುಗಳಿಗೆ ಆಶ್ರಯ ನೀಡಿದೆ. ನಮ್ಮ ಕರ್ನಾಟಕ ಸರ್ಕಾರಗಳು ಇಲ್ಲಿನ ಉಪಭಾಷೆಗಳನ್ನು ಅಲಕ್ಷಿಸಿಲ್ಲ ಎನ್ನುವುದಕ್ಕೆ ಇಲ್ಲಿ ಕ್ರಿಯಾಶೀಲವಾಗಿರುವ ತುಳು ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಗಳೇ ಸಾಕ್ಷಿ. ಈ ಅಕಾಡೆಮಿಗಳು ಕೇವಲ ತಮ್ಮ ಭಾಷೆಗಳಿಗೆ ಮಾತ್ರ ಸೀಮಿತವಾಗಿರದೆ ಕನ್ನಡ ಸಾಹಿತ್ಯ ಕುರಿತಂತೆಯೂ ಕ್ರಿಯಾಶೀಲವಾಗಿರುವುದು ಹೆಮ್ಮೆಯ ಸಂಗತಿ. ಇಂಥ ಕೊಂಕಣಿ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಕನ್ನಡ ಲೇಖಕನಾದ ನನ್ನನ್ನು ಆಮಂತ್ರಿಸಿರುವುದೇ ಇದಕ್ಕೆ ಸಾಕ್ಷಿ. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಿಗೆ, ಇದರ ಸದಸ್ಯರಿಗೆ, ರಿಜಿಸ್ಟ್ರಾರ್ ಅವರಿಗೆ ಹಾಗೂ ಯುವಮಿತ್ರ ವಿಲ್ಸನ್ ಕಟೀಲ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಪ್ರಪಂಚಾದಾದ್ಯಂತ ಸಹಸ್ರಾರು ಭಾಷೆಗಳು ಚಾಲ್ತಿಯಲ್ಲಿವೆ. ಒಂದು ಭಾಷೆಯ ಶಬ್ದಗಳನ್ನು ಇನ್ನೊಂದು ಭಾಷೆ ಕಬಳಿಸುವುದು ಅಥವಾ ಬರಮಾಡಿಕೊಳ್ಳುವುದು ಆಯಾ ಕಾಲಘಟ್ಟದಲ್ಲಿ ನಡೆದೇ ಇದೆ. ವಸಾಹತುಶಾಹಿಯ ಹಿಕಮತ್ತಿನಿಂದ ಭಾಷೆಗಳು ದುರ್ಬಲಗೊಳ್ಳುವುದು ಕ್ರಮೇಣ ನೇಪಥ್ಯಕ್ಕೆ ಸರಿದು ಕಾಲಗರ್ಭ ಸೇರುವುದು ಸರ್ವೇಸಾಮಾನ್ಯ. ಭಾಷೆ ಭಾಷೆಗಳ ಮಧ್ಯೆ ಸಂವಹನ ಸಾಧ್ಯತೆ ಇದ್ದರೆ ಮಾತ್ರ ಭಾಷೆ ಉಳಿದು ಬೆಳೆಯಲು ಸಾಧ್ಯ. ಹಾಗೆ ಬೆಳವಣಿಗೆಯ ಹಾದಿಯಲ್ಲಿ ನಿರಂತರವಾಗಿ ಸಾಗಿರುವ ನೂರಾರು ಭಾಷೆಗಳು ನಮ್ಮ ಅರಿವಿನ ಪರಿಧಿಯೊಳಗಿವೆ. ಅಂಥ ಸಂಘರ್ಷಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಚಿಕ್ಕ ಚಿಕ್ಕ ಉಪಭಾಷೆಗಳಿಗಿದೆ, ಆದರೆ ಲಿಪಿ ಸೌಕರ್ಯವಿರುವ ಪ್ರಧಾನ ಭಾಷೆಗಳಿಗಿಲ್ಲ. ಅದೃಷ್ಟವಶಾತ್ ನಮ್ಮ ಕನ್ನಡ ಭಾಷೆಗೆ ಜಾಗತೀಕರಣದ ಎಲ್ಲಾ ಹಲ್ಲೆಗಳನ್ನು ಜಯಿಸಿ ಮುನ್ನುಗ್ಗುವ ಬೆಳೆಯುವ ಶಕ್ತಿ ಇದೆ.

ಹತ್ತನೇ ಶತಮಾನದವರೆಗಿನ ಆಚಾರ್ಯ ಕೃತಿಗಳು ಮತ್ತು ಸಹಸ್ರಾರು ಶಾಸನಗಳಲ್ಲಿನ ಸೌಂದರ್ಯವರ್ಧಿತ ಭಾಷಾ ಪ್ರಯೋಗಗಳು ಅದಕ್ಕೆ ಕಾರಣ. ಅಲ್ಲದೆ ನಾಡನ್ನು ಆಳಿದ ಕದಂಬ ಚಾಲುಕ್ಯ ರಾಷ್ಟ್ರಕೂಟ ಹೊಯ್ಸಳ ವಿಜಯನಗರದಂಥ ಸಾಮ್ರಾಜ್ಯಗಳನ್ನು ಕಟ್ಟಿ ಆಳಿದ ಆಯಾ ಕಾಲದ ಅರಸರುಗಳು ನಾಡು ನುಡಿಯ ಏಳಿಗೆಗಾಗಿ ಸಮೃದ್ದಿಗಾಗಿ ಶ್ರಮಿಸಿರುವುದೂ ಇದಕ್ಕೆ ಕಾರಣ. ಕನ್ನಡ ಕೇವಲ ಒಂದು ಭಾಷೆಯಲ್ಲ, ನಾಡು ಕೇವಲ ಒಂದು ಪ್ರದೇಶವಲ್ಲ. ಎಂಟನೆ ಶತಮಾನದ ಆಚಾರ್ಯ ಕೃತಿಯಾದ ಶ್ರೀವಿಜಯ ವಿರಚಿತ ಕವಿರಾಜಮಾರ್ಗದಲ್ಲಿ ಉಲ್ಲೇಖಿತವಾಗಿರುವ ಕರ್ನಾಟಕ ಭಾವಾತ್ಮಕವಾಗಿ ನಮ್ಮ ಕಣ್ಣ ಮುಂದಿದೆ. ಅದು ದಕ್ಷಿಣದ ಕಾವೇರಿಯಿಂದ ಆರಂಭಿಸಿ ಉತ್ತರದ ಗೋದಾವರಿವರೆಗೆ ಹರಡಿದೆ. ಸಮಕಾಲೀನ ಕನ್ನಡದ ಒಡಲಲ್ಲಿ ನೂರಾರು ಕನ್ನಡಂಗಳ್ ಇವೆ. ಅವು ಮರಾಠಿ ಕನ್ನಡ, ತೆಲುಗು ಕನ್ನಡ, ಕರಾವಳಿ ಕನ್ನಡ, ತಮಿಳು ಕನ್ನಡ, ಮಲೆಯಾಳಂ ಕನ್ನಡ... ಹೀಗೆ ಹತ್ತು ಹಲವು ಪ್ರಭೇದಗಳು. ಅದಲ್ಲದೆ ಪ್ರತಿ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದೊಂದು ಕನ್ನಡವಿದೆ. ಸುಶಿಕ್ಷಿತರಿಗಿಂತ ಮುಖ್ಯವಾಗಿ ಅಶಿಕ್ಷಿತರು ತಮ್ಮ ಅವ್ಯಾಹತ ಬಳಕೆಯಿಂದ ಕನ್ನಡ ನುಡಿಯ ಸ್ವರೂಪವನ್ನು ವಿಸ್ತರಿಸುತ್ತಲೇ ಇದ್ದಾರೆ. ಆದ್ದರಿಂದ ಯಾವುದೇ ಒಂದು ಭಾಷೆಯನ್ನು ಅಪರಿಪೂರ್ಣವೆನ್ನಲಾಗದು.
 
ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಅದೊಂದು ಸಾಂಸ್ಕೃತಿಕ ಸಂಸ್ಥೆ. ಅದು ತನ್ನನ್ನು ಬಳಸುವವರನ್ನು ಬೌದ್ಧಿಕವಾಗಿ ವಿಕಾಸಗೊಳಿಸುತ್ತದೆ, ಅದು ಭಾವಾತ್ಮಕವೂ ಹೌದು. ಭಾಷೆಗೆ ತನ್ನದೇ ಆದ ಶೈಲಿಯನ್ನು ರೂಪಿಸಿಕೊಳ್ಳುವ ಶಕ್ತಿ ಇರುತ್ತದೆ. ಭಾಷೆಯ ಅಸ್ತಿತ್ವ ತನ್ನನ್ನು ಬಳುಸುವವರನ್ನು ಅವಲಂಬಿಸಿ ಇರುತ್ತದೆ. ಭಾಷೆಯ ಪ್ರಧಾನ ಶತ್ರುಗಳೆಂದರೆ ಮುಜುಗರ ಮತ್ತು ಸಂಕೋಚ. ಆದ್ದರಿಂದ ನಿರಂತರ ಬಳಕೆಯಿಂದ ಭಾಷೆಯ ಅಭಿವೃದ್ಧಿ ಸಾಧ್ಯ. ಸಮಾಜ, ಜೀವನ, ಶಿಕ್ಷಣ, ನ್ಯಾಯಾಲಯ, ವಾಣಿಜ್ಯ, ಕೈಗಾರಿಕೆ, ಹಾಗೂ ನೀತಿರೂಪಕ ವಲಯಗಳು ಸೇರಿದಂತೆ ಹತ್ತು ಹಲವು ರಂಗಗಳಲ್ಲಿ ಭಾಷೆಯನ್ನು ನಿಸ್ಸಂಕೋಚವಾಗಿ ಬಳಸುವುದು ಮುಖ್ಯ. ಭಾಷೆಗಳನ್ನು ಪರಸ್ಪರ ಪೂರಕವಾಗಿ ಬಳಸುವುದರಿಂದ ಅದು ವೈವಿಧ್ಯಮಯವಾಗುವುದು. ದೇಶದ ಬೆಳವಣಿಗೆಯಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ.

1947ರಲ್ಲಿ ಅಂದರೆ ಭಾರತ ಸ್ವತಂತ್ರವಾಗುವ ವೇಳೆಗೆ ಪ್ರಾಥಮಿಕ ಹಂತದಿಂದ ಪ್ರೌಢ ಹಂತದವರೆಗೆ ಶಿಕ್ಷಣ ಮಾತೃ ಭಾಷಾ ಮಾಧ್ಯಮದಲ್ಲಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಆ ಸ್ಥಾನವನ್ನು ವಿದೇಶಿ ಭಾಷೆಗಳು ಆಕ್ರಮಿಸಿಕೊಳ್ಳಲಾರಂಭಿಸಿವೆ. ಪ್ರಾದೇಶಿಕ ಭಾಷೆಗಳಿಗೆ ದುರ್ಬಲ ಹಾಗೂ ರೂಕ್ಷ ಎಂಬ ಪಟ್ಟ ಕಟ್ಟಲಾಗುತ್ತಿದೆ. ಇದು ಜಾಗತೀಕರಣ ಪ್ರಭಾವವೆಂದು ಹೇಳಿ ನುಣುಚಿಕೊಳ್ಳುವ ಯತ್ನ ನಡೆಯುತ್ತಿದೆ, ಆಳುವ ಪ್ರಭುತ್ವಗಳು ಇದಕ್ಕೆ ಕೈಜೋಡಿಸಲಾರಂಭಿಸಿವೆ.

ಇಷ್ಟೆಲ್ಲಾ ಅವಘಡಗಳ ನಡುವೆಯೂ ಕನ್ನಡ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ಹೆಣಗುತ್ತಿದೆ. ಕನ್ನಡಕ್ಕಿರುವ ಬಹು ದೊಡ್ಡ ಶಕ್ತಿ ಎಂದರೆ ನೆರೆಹೊರೆಯ ಭಾಷೆಗಳನ್ನು ತನ್ನ ಕಡೆ ಸ್ವಾಗತಿಸುತ್ತಿರುವುದು. ಕನ್ನಡೇತರ ಪದಗಳನ್ನು ತದ್ಭವಿಸಿಕೊಳ್ಳುತ್ತಿರುವುದು.  ಈ ಶಕ್ತಿ ಇನ್ನಿತರ ಭಾಷೆಗಳಿಗಿಲ್ಲ. ನುಡಿಗೆ ಆಶ್ರಯ ನೀಡಿರುವ ನಮ್ಮ ನಾಡೂ ಇದಕ್ಕೆ ಹೊರತಲ್ಲ. ನಮ್ಮ ನಾಡಿಗಿರುವ ಮೇಲ್ಮೈ ಲಕ್ಷಣವೂ ಇದಕ್ಕೆ ಪೂರಕವಾಗಿದೆ. ಈ ಕಾರಣದಿಂದಾಗಿಯೇ ನೆರೆಹೊರೆಯ ಬಹುತೇಕರು ಇಲ್ಲಿಗೆ ವಲಸೆ ಬರುತ್ತಿರುವುದು. ನಮ್ಮ ಭಾಷೆಯು ಹಲವು ಪ್ರಭೇದಗಳ ಆಗರವಾಗಿರುವುದು. ಕನ್ನಡ ತನ್ನ ರಾಜ್ಯಕ್ಕೆ ಸೇರಿದ ಕೊಂಕಣಿ, ತುಳು, ಕೊಡವ, ಲಂಬಾಣಿ ಸೇರಿದಂತೆ ಹತ್ತು ಹಲವು ಉಪಭಾಷೆಗಳನ್ನು ಪೊರೆಯುತ್ತಿರುವುದು. ಇವಿಷ್ಟೇ ಅಲ್ಲದೆ ಇನ್ನೂ ಭಾಷಿಕ ಪ್ರಭೇದಗಳಿರುವುದಾಗಿ ಭಾಷಾವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದರಲ್ಲಿ ಪಶ್ಚಿಮ ಘಟ್ಟಗಳುದ್ದುಕ್ಕೂ ನೆಲೆಸಿರುವ ಬುಡಕಟ್ಟುಗಳು, ಕಂದಾಯ ಇಲಾಖೆಯ ವ್ಯಾಪ್ತಿಗೆ ಸಿಗದ ಆದಿವಾಸಿಗಳು ಆಡುವ ಎಷ್ಟೋ ಭಾಷೆಗಳಿವೆ. ಇವುಗಳಿಗೆ ಸಹಸ್ರಾರು ವರ್ಷಗಳ ಶೌರ್ಯ ಪ್ರಧಾನ ಇತಿಹಾಸವಿದೆ. ಇವೆಲ್ಲ ಸ್ಥಳೀಯ ಪ್ರಭುತ್ವಗಳೊಂದಿಗೆ ಮಾತ್ರವಲ್ಲದೆ ವಿದೇಶಿಯರ ಹಲ್ಲೆಗಳನ್ನೂ ಜೀರ್ಣಿಸಿಕೊಂಡ ಕಾರಣಕ್ಕೆ ವೈವಿಧ್ಯತೆ ಉಳಿಸಿಕೊಂಡಿವೆ.

ತುಳು, ಕೊಡವ, ಕೊಂಕಣಿಯ ಕುರುಹುಗಳು ಗುಪ್ತರ ಕಾಲದಲ್ಲಿರುವವಲ್ಲದೆ ಪಲ್ಲವ ಚೋಳರ ಕಾಲದಲ್ಲೂ ಇವೆ ಎನ್ನುವುದು ಗಮನಾರ್ಹ. ನಿರಂತರ ವಲಸೆ ಕಾರಣಕ್ಕೆ ಇವುಗಳ ವ್ಯಾಪ್ತಿ ಗುಜರಾತ್, ಅರಬ್, ಫೋರ್ಚುಗಲ್ ವರೆಗೂ ಹರಡಿದೆ. ಮುಖ್ಯವಾಗಿ ಕೊಂಕಣಿ ಏಷ್ಯಾ ಖಂಡದ ಪ್ರಾಚೀನ ಭಾಷೆಗಳಾದ ಪಾಳಿ, ಬ್ರಾಹ್ಮೀ, ಪೈಶಾಚಿಗಳಲ್ಲೂ ತನ್ನ ಅವಶೇಷಗಳನ್ನು ಹರಿಬಿಟ್ಟಿದೆ. ಸುಮಾರು ಐವತ್ತು ಲಕ್ಷಕ್ಕೂ ಮೇಲ್ಪಟ್ಟು ಕೊಂಕಣಿ ಭಾಷಿಕರಿದ್ದಾರೆ. ಇವರ ಉಲ್ಲೇಖ ಸ್ಕಂದಪುರಾಣದಲ್ಲೂ ಇದೆ. ಪರಶುರಾಮನ ಅಭಿಮಾನದ ಈ ಪ್ರದೇಶ ಕರಾವಳಿ ಉದ್ದಗಲಕ್ಕೂ ವ್ಯಾಪಿಸಿದೆ.

ನಾಗಪುರ ವಿಶ್ವವಿದ್ಯಾಲಯದ ಇತಿಹಾಸ ತಜ್ಞರಾದ ಡಾ ಕುಲಕರ್ಣಿ ಮತ್ತು ಅಮೇರಿಕಾ ವಿಶ್ವವಿದ್ಯಾಲಯದ ಡಾ ಜೋಸೆ ಅವರು ಶ್ರವಣಬೆಳ್ಗೊಳಕ್ಕೆ ಭೆಟ್ಟಿ ನೀಡಿ ಸಂಶೋಧನೆ ನಡೆಸಿದ್ದಾರೆ. ಬಾಹುಬಲಿಯ ಪಾದದ ಬಳಿಯಲ್ಲಿರುವ ಎರಡು ಸಾಲುಗಳಲ್ಲಿ ಕೊಂಕಣಿ ಭಾಷೆಯ ಛಾಯೆ ಇರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ.
ಭಾರತೀಯ ಕರೆನ್ಸಿ ನೋಟಿನಲ್ಲಿ ಹದಿನೈದು ಭಾಷೆಗಳನ್ನು ಮುದ್ರಿಸಲಾಗಿರುವುದಷ್ಟೆ. ಅವುಗಳಲ್ಲಿ ಕೊಂಕಣಿ ಆರನೆಯ ಸ್ಥಾನ ಪಡೆದುಕೊಂಡಿರುವುದು ಅಭಿಮಾನದ ಸಂಗತಿ, ಕೊಂಕಣಿ ಭಾಷೆಗೆ ತನ್ನದೇ ಆದ ಲಿಪಿ ಸೌಲಭ್ಯವಿಲ್ಲದಿರುವುದು ದೌರ್ಭಾಗ್ಯದ ಸಂಗತಿ, ಪ್ರಾಚೀನ ಭಾಷೆಯಾದ ಇದು ದೇವನಾಗರಿ, ಹಿಂದಿ ಭಾಷೆಗಳ ಲಿಪಿ ಸೌಕರ್ಯ ಅವಲಂಭಿಸಿದೆ. ಕನ್ನಡನಾಡಿನ ಬಹುಮುಖ್ಯ ಭಾಷೆಯಾದ ಇದು ಕನ್ನಡ ಲಿಪಿಯಲ್ಲೂ ಬರೆಯಿಸಿಕೊಳ್ಳುತ್ತಿರುವುದು ಅಭಿಮಾನದ ವಿಷಯ. ಆದರೆ ಕನ್ನಡ ಲಿಪಿಯನ್ನಾಶ್ರಯಿಸಿದರೆ ಅಕಾಡೆಮಿಕ್ ಮನ್ನಣೆ ಇಲ್ಲದಿರುವುದು ಖೇದದ ಸಂಗತಿ.

ಭಾರತೀಯ ಅಧಿಕೃತ ಇಪ್ಪತ್ತೆರಡು ಭಾಷೆಗಳಲ್ಲಿ ಕೊಂಕಣಿಗೂ ಗೌರವಾನ್ವಿತ ಸ್ಥಾನ ಲಭಿಸಿರುವ ನೇಪಥ್ಯದಲ್ಲಿ ಹೋರಾಟವಿದೆ, ಬಲಿದಾನವಿದೆ. ಇಷ್ಟೆಲ್ಲಾ ತೊಂದರೆ ತಾಪತ್ರಯ ಅನುಭವಿಸಿದ ಬಳಿಕ ಇದು ನೆರೆಯ ರಾಜ್ಯವಾದ ಗೋವಾದಲ್ಲಿ ಆಡಳಿತ ಭಾಷೆಯ ಸ್ಥಾನ ಮಾನ ಪಡೆದುಕೊಂಡಿದೆ. ಕೊಂಕಣಿಗರು ಆಮ್ಚಿ ಭಾಸ್ ಎಂದು ಕರೆಯುವುದರ ಮೂಲಕ ಕೊಂಕಣಿಯನ್ನು ಗೌರವಿಸುತ್ತಾರೆ. ಹಾಗೆಯೆ ಮರಾಠಿಗರು, ಗುಜರಾತಿಗಳು ಇನ್ನಿತರರೊಂದಿಗೆ ಕೊಂಕಣಿ ಭಾವನಾತ್ಮಕ ಸಂಬಂಧವನ್ನಿರಿಸಿಕೊಂಡಿದೆ. ಹೋಟಲ್ ಉದ್ದಿಮೆಗಳಾದ ಕಾಮತ್ ಸಮುದಾಯದವರು, ಸಾರಸ್ವತ ಬ್ರಾಹ್ಮಣರು ಕೊಂಕಣಿ ಭಾಷೆಯ, ಕೊಂಕಣಿ ಸಾಹಿತ್ಯದ ಸಂಸ್ಕೃತಿಯ ನೈಜ ರಾಯಭಾರಿಗಳು. ಕೊಂಕಣಿಯ ಖ್ಯಾತ ಕಾದಂಬರಿಕಾರ ದೇವದಾಸ ಕಾಮತ್ ಅವರ ಸಂಗಡ ನಾನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದದ್ದು ನೆನಪಿನಲ್ಲಿದೆ. ಈಗಲೂ ಅವರು ನನ್ನೊಂದಿಗೆ ಸಂಬಂಧವನ್ನಿರಿಸಿಕೊಂಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆಯಲ್ಲಿರುವ ಕೋಡಿಯಾಲ ಹೆಸರಿನ ಹೋಟಲ್ ಕೊಂಕಣಿ ನಾಡಿನ ಸ್ವಾದಿಷ್ಟ ಊಟ ತಿಂಡಿಗಳನ್ನು ಉಣಬಡಿಸುತ್ತಿದೆ. ಪ್ರಪಂಚದಾದ್ಯಂತ ಹರಡಿರುವ ಕೊಂಕಣಿಗರು ಅಸೀಮ ಸಾಹಸಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.

ಜಾಗತೀಕರಣವನ್ನು ಮೆಟ್ಟಿ ನಿಲ್ಲುವ ಶಕ್ತಿ ಕನ್ನಡಕ್ಕಿರುವಂತೆ ಕೊಂಕಣಿಯಂತಹಾ ಅಲ್ಪಸಂಖ್ಯಾತ ಭಾಷೆಗಳಿಗೂ ಇದೆ. ಈ ಎಲ್ಲಾ ಆಲೋಚನೆಯಿಂದ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ್ದೇನೆ.


 ಕುಂಬಾರ ವೀರಭದ್ರಪ್ಪ (ಕುಂವೀ) ಪರಿಚಯ:

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ, ೧ ಅಕ್ಟೋಬರ್, ೧೯೫೩ರಂದು. ಎಂ.ಎ ಪದವೀಧರರು. ಆಂಧ್ರಪ್ರದೇಶದ ವಂದವಾಗಿಲಿ, ಗೂಳ್ಯಂ ಮತ್ತು ಹಿರೇಹಾಳುಗಳಂಥ ಹಳ್ಳಿಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವರು.
ಸದ್ಯಕ್ಕೆ ಕೊಟ್ಟೂರಲ್ಲಿ ನೆಲೆಸಿದ್ದಾರೆ.

ಕೃತಿಗಳು: ಕಥಾ ಸಂಕಲನಗಳು:
ಇನ್ನಾದರೂ ಸಾಯಬೇಕು (೧೯೮೨), ಡೋಮ ಮತ್ತಿತರ ಕಥೆಗಳು(೧೯೮೫), ಕುಂವೀ ಕಥೆಗಳು (೧೯೮೫), ಭಗವತಿ ಕಾಡು (೧೯೯೦), ನಿಜಲಿಂಗ (೧೯೯೪), ಸುಶೀಲೆ ಎಂಬ ನಾಯಿಯೂ ವಾಗಿಲಿ ಎಂಬ ಗ್ರಾಮವೂ (೧೯೯೫), ಅಪೂರ್ವ ಚಿಂತಾಮಣಿ ಕತೆ (೧೯೯೬), ಭಳಾರೆ ವಿಚಿತ್ರಂ(೨೦೦೨), ಕೂಳೆ(೨೦೦೭), ಕುಂವೀ ಆಯ್ದ ಕಥೆಗಳು(೨೦೦೭), ಬರೀ ಕಥೆಯಲ್ಲೋ ಅಣ್ಣಾ (ಸಮಗ್ರ ಕಥಾಸಂಕಲನ ೨೦೧೦), ಮಣ್ಣೇ ಮೊದಲು (೨೦೦೪), ನಿಗಿನಿಗಿ ಹಗಲು (೨೦೦೭), ರಾಯಲಸೀಮೆ (೨೦೦೮), ಸೂರ್ಯನ ಕೊಡೆ(೨೦೧೧), ಎಂಟರ್ ದಿ ಡ್ರಾಗನ್ (೨೦೧೩).

ಕಾದಂಬರಿಗಳು:
ಕಪ್ಪು (೧೯೮೦), ಬೇಲಿ ಮತ್ತು ಹೊಲ (೧೯೮೨), ಆಸ್ತಿ (೧೯೮೩), ಹನುಮ (೧೯೮೪), ದ್ಯಾವಲಾಪುರ (೧೯೮೩), ಪಕ್ಷಿಗಳು (೧೯೮೫), ಪ್ರತಿದ್ವಂಧಿ (೧೯೮೫), ಪ್ರೇಮವೆಂಬ ಹೊನ್ನುಡಿ (೧೯೮೫), ಕೆಂಡದ ಮಳೆ (೧೯೮೬), ಕೊಟ್ರ ಹೈಸ್ಕೂಲಿಗೆ ಸೇರಿದ್ದು (೧೯೯೨) ಶಾಮಣ್ಣ (೧೯೯೮), ಯಾಪಿಲು (೨೦೦೧), ಅರಮನೆ (೨೦೦೪), ಆರೋಹಣ (೨೦೦೯), ಹೇಮರೆಡ್ಡಿ ಮಲ್ಲಮ್ಮನ ಕಥೆಯು (೨೦೧೨), ಏಕಾಂಬರ (೨೦೧೨).

ಅನುವಾದ:
ತೆಲುಗು ಕಥೆ-೩೦ ತೆಲುಗು ಕಥೆಗಳ ಕನ್ನಡ ಅನುವಾದ (೧೯೯೮), ಒಂದು ಪೀಳಿಗೆಯ ತೆಲುಗು ಕಥೆಗಳು-ಒಕ ತರಂ ತೆಲುಗು ಕಥೆಗಳ ಕಥಾ ಸಂಕಲನದ ೩೬ ಕಥೆಗಳ ಕನ್ನಡ ಅನುವಾದ (೨೦೦೧), ಚಿನ್ನದ ತೆನೆ- ತೆಲುಗಿನ ಬಂಗಾರು ಕಥಲು ಸಂಕಲನದ ೭೬ ತೆಲುಗು ಕಥೆಗಳ ಕನ್ನಡ ಅನುವಾದ(೨೦೧೦), ತನ್ನ ಮಾರ್ಗ- ತೆಲುಗಿನ ಡಾ. ಅಬ್ಬೂರಿ ಛಾಯದೇವಿಯವರ ತನ ಮಾರ್ಗಂ ಸಂಕಲನದ ೨೮ ಕಥೆಗಳ ಕನ್ನಡ ಅನುವಾದ (೨೦೧೧). ಈ ಐದು ಅನುವಾದಿತ ಸಂಕಲನಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ.

ಕವನ ಸಂಕಲನ:
ದಿವಿ ಸೀಮೆಯ ಹಾಡು(೧೯೭೬)

ಜೀವನ ಚರಿತ್ರೆ:
ಚಾಪ್ಲಿನ್(೧೯೯೯), ಸುಭದ್ರಮ್ಮ ಮನ್ಸೂರು, ನೇತಾಜಿ ಸುಭಾಳ್‌ಚಂದ್ರ ಬೋಸ್, ರಾಹುಲ ಸಾಂಕೃತ್ಯಾಯನ, ಶ್ರೀಕೃಷ್ಣದೇವರಾಯ.

ವಿಮರ್ಶೆ:
ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ.

ಆತ್ಮಕಥೆ:
ಗಾಂಧಿಕ್ಲಾಸು.

ಚಲನಚಿತ್ರಗಳಾದ ಕೃತಿಗಳು:
ಮನ ಮೆಚ್ಚಿದ ಹುಡುಗಿ, ಕೆಂಡದಮಳೆ, ದೊರೆ, ಕೊಟ್ರೇಶಿ ಕನಸು (ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ), ಬೇಲಿ ಮತ್ತು ಹೊಲ, ಭಗವತಿ ಕಾಡು, ಕೂರ್ಮಾವತಾg (ರಜತ ಕಮಲ ರಾಷ್ಟ್ರಪ್ರಶಸ್ತಿ, ವೈಯಕ್ತಿಕವಾಗಿ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿ)- ಇವು ಇವರ ಕಥೆ ಕಾದಂಬರಿಗಳಾಧರಿತ ಚಲನಚಿತ್ರಗಳು.

ಇನ್ನಿತರ ವಿವರಗಳು:
ಇವರ ಕಥೆ, ಕಾದಂಬರಿಗಳ ಬಗ್ಗೆ ಎಂಟು ಎಂ.ಫಿಲ್ ಪ್ರಬಂಧಗಳು, ಏಳು ಪಿಎಚ್.ಡಿ ಮಹಾಪ್ರಬಂಧಗಳು ಪ್ರಕಟಗೊಂಡಿವೆ. ಇವರ ಬಹುತೇಕ ಕಥೆ ಕಾದಂಬರಿಗಳನ್ನು ನಾಡಿನ ಹಲವು ವಿಶ್ವವಿದ್ಯಾಲಯಗಳು ಪದವಿ ಹಾಗೂ ಸ್ನಾತಕೋತ್ತರ ತರಗತಿಗಳಿಗೆ ಪಠ್ಯವಾಗಿರಿಸಿದೆ. ಇವರ ಹಲವಾರು ಕಥೆಗಳು ಇಂಗ್ಲೀಷ್ ಹಾಗೂ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಅಲ್ಲದೆ ಹತ್ತಾರು ಕಥೆಗಳು ಕಿರುಚಿತ್ರಗಳಾಗಿ ದೃಶ್ಯಮಾಧ್ಯಮಗಳಲ್ಲಿ ಪ್ರಸಾರಗೊಂಡಿವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಚಲನಚಿತ್ರ ಸಹಾಯಧನ ಸಮಿತಿಯ ಸದಸ್ಯತ್ವ, ಅನುವಾದ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಮತ್ತು ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಲೇಖಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ರೆಸಿಡೆಂಟ್ ರೈಟರ್ ಹೊಣೆಗಳನ್ನೂ ಕುಂವೀ ನಿರ್ವಹಿಸಿರುವರು.

ಪುರಸ್ಕಾರಗಳು:
ಇವರು ತಮ್ಮ ಕೃತಿಗಳಿಗೆ ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನವನ್ನು, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿಯನ್ನು ಪಡೆದಿರುವರಲ್ಲದೆ ತಮ್ಮ ಮಹಾ ಕಾದಂಬರಿ ಅರಮನೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೨೦೦೮) ಪಡೆದಿದ್ದಾರೆ.
ಅಲ್ಲದೆ ಕಾಂತಾವರದ ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ಪುತ್ತೂರಿನ ಉಗ್ರಾಣ ಪ್ರಶಸ್ತಿ, ತುಮಕೂರಿನ ವೀಚಿ ಪ್ರತಿಷ್ಠಾನ ಪ್ರಶಸ್ತಿ, ಅಥಣಿಯ ಸಿರಸಂಗಿ ಲಿಂಗರಾಜ ಪ್ರಶಸ್ತಿ, ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಮಂಗಳೂರಿನ ಸಂದೇಶ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ (೨೦೦೪) ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯವು ಕುಂವೀಯವರಿಗೆ ೨೦೧೧ರ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ನೃಪತುಂಗ ಪ್ರಶಸ್ತಿಯನ್ನು ೧೩-೧೨-೨೦೧೪ ರಂದು ಬೆಂಗಳೂರಿನಲ್ಲಿ ಕುಂವೀಯವರಿಗೆ ಹಸ್ತಾಂತರಿಸಲಾಯಿತು.