Print


ವ್ಯಕ್ತಿಯ ಬದುಕಿನ ಆದಿಯಿಂದ ಅಂತ್ಯದ ತನಕ ಜೊತೆಗಾರನಾಗಿ, ಸಹಚರನಾಗಿ ನೆರವಿಗೆ ಬರುವುದು ಮಾತೃಭಾಷೆ.  ದೈನಂದಿನ ವ್ಯಾಪಾರ, ವ್ಯವಹಾರ, ಸಲ್ಲಾಪ, ಪ್ರೇಮ ಕಲಹ-ಕಲಾಪ ಎಲ್ಲವೂ ವ್ಯಕ್ತಿಯ ಮಾತೃಭಾಷೆಯಲ್ಲೇ ನಡೆಯುತ್ತದೆ.
ತೊಟ್ಟಲಿಂದ ಚಟ್ಟದವರೆಗೆ ಮಾತೃಭಾಷೆ ವ್ಯಕ್ತಿಗೆ ಊರುಗೋಲು. ಅದು ಎಲ್ಲ ವಿಧದಲ್ಲಿ ವ್ಯಕ್ತಿಯ ಬಾಳನ್ನು ಬೆಳಗುತ್ತದೆ. ಬದುಕು-ಭಾವವನ್ನು  ಸಂಸ್ಕರಿಸುತ್ತದೆ. ಸ್ಯಾಡ್ಲರ್ ಆಯೋಗ ಅಥವಾ ಕೋಲ್ಕತ್ತಾ ವಿ.ವಿ. ಆಯೋಗದ (1917-19) ಪ್ರಕಾರ ಮಾತೃಭಾಷೆಯು ವ್ಯಕ್ತಿಯ ನೆರಳಿನಂತೆ.  ಅದು ವ್ಯಕ್ತಿತ್ವದ ಅವಿನಾ ಭಾಗ.  ಆದ್ದರಿಂದ ಮಾತೃಭಾಷೆಯನ್ನು  ಶಾಲೆಗಳಲ್ಲಿ ಪ್ರಥಮ ಭಾಷೆಯ ನೆಲೆಯಲ್ಲಿ ಕಲಿಸಲಾಗುತ್ತದೆ.  ಪ್ರಪಂಚದಾದ್ಯಂತ ಶಿಕ್ಷಣಕ್ರಮದಲ್ಲಿ ಮಾತೃಭಾಷೆಗೇ ಅಗ್ರಮಣೆ.  ಭಾರತದ ಸಂದರ್ಭದ;ಲ್ಲಿ 19ನೆಯ ಶತಮಾನದ ಆದಿಯಿಂದಲೆ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕೆಂಬ ಬೇಡಿಕೆಗಳು ಕೇಳಿಬಂದವು. ಎಲ್ಲ ಶಿಕ್ಷಣ ಆಯೋಗಗಳು, ಗಾಂಧಿ, ರಾಧಾಕೃಷ್ಣನ್ ಮುಂತಾದ ವಿಚಾರವೇತ್ತರು ಮಾತೃಭಾಷೆಯ ಮೂಲಕ ಬೋಧನೆ ಮತ್ತು ಕಲಿಕೆಯನ್ನು ಸಮರ್ಥಿಸಿದ್ದಾರೆ.  ಕಷ್ಠ ಪ್ರೌಢಶಾಲಾ ಹಂತದವರೆಗಾದರೂ ಶಿಕ್ಷಣವನ್ನು ಮಗುವಿನ ತಾಯ್ನುಡಿಯ ಮೂಲಕವೇ ಕೊಡಬೇಕೆಂಬುದು ಶಿಕ್ಷಣತಜ್ಞರ ಒಮ್ಮತದ ಅಭಿಪ್ರಾಯ. (ಒಂದು ಭಾಷೆಯನ್ನು ಕಲಿಯುವುದಕ್ಕೂ ಭಾಷೆಯ ಬಗೆಗೆ ತಿಳಿಯುವುದಕ್ಕೂ ಭಾಷೆಯ ಮೂಲಕ ಕಲಿಯುವುದಕ್ಕೂ ಹಲವು ವ್ಯತ್ಯಾಸಗಳಿವೆ. ಎಂಬುದನ್ನು ಗಮನಿಸಬೇಕು.)

ಭಾಷೆ ಎಂದರೆ ಬುದ್ಧಿ-ಭಾವಗಳ ವಿದ್ಯುದಾಲಿಂಗನ. ಬುದ್ಧಿಯ ಅಲಗಿನ ಸ್ಪರ್ಶವಿಲ್ಲದೆ ಭಾವ ಕೀವಾಗುತ್ತದೆ. ಭಾವದ ಸಂಪರ್ಕವಿಲ್ಲದೆ ಬುದ್ಧಿ ರಾಕ್ಷಸವಾಗುತ್ತದೆ. (ಅನಂತಮೂರ್ತಿ) ಈ ಎರಡರ ಮಿಲನದಿಂದ ಭಾಷೆ ಹುರಿಗೊಳ್ಳುತ್ತದೆ. ಭಾಷೆ ಭಾವನೆ-ವಿಚಾರಗಳ ವಾಹಕ.  ಅದು ಸಂವಹನ - ಸಂಪರ್ಕ ಹಾಗೂ ಚಿಂತನದ ಸಾಧನ.

ಮನುಷ್ಯ ಸೃಷ್ಟಿಯ ಕಿರೀಟ. ಆತ ವಿಚಾರ ಜೀವಿ, ಸಮಾಜ ಜೀವಿ. ಸಂಘ ಜೀವಿ. ತ್ಯವೂ ತನ್ನ ಸುತ್ತಲಿನ ಪರಿಸರಕ್ಕೆ ಪ್ರತಿಕ್ರಿಯಿಸುತ್ತಾ ನೂರಾರು ವಿಚಾರಗಳನ್ನು ಕುರಿತು ಚಿಂತಿಸುತ್ತಾನೆ.  ಚಿಂತನಶೀಲತೆ ಮಾನವನ ಪ್ರಧಾನ ಲಕ್ಷಣ.  ಈ ಚಿಂತನ ನಿತ್ಯ ನಿರಂತರ ಮತ್ತು ಚಿರನೂತನ.  ಚಿಂತನ ಹರಳುಗಟ್ಟುವುದು ಪದಗಳಲ್ಲಿ;  ಆದ್ದರಿಂದಲೆ ಐ.ಎ.ರಿಚರ್ಡ್ಸ ಹೇಳುತ್ತಾನೆ - ಪದ ಒಂದು ಸಲಕರಣೆ ಎಂದು. ನಮ್ಮ ಚಿಂತನಶೀಲತೆ, ವೈಚಾರಿಕ ಪ್ರಕ್ರಿಯೆ ಪ್ರಥಮವಾಗಿ ನಡೆಯುವುದು ನಮ್ಮ ಮಾತೃಭಾಷೆಯಲ್ಲಿ (ಇಂಗ್ಲಿಷಿನಲ್ಲಿ ಮಾತನಾಡುವಾಗಲೂ ಮನಸ್ಸು ತರ್ಜುಮೆ ಮಾಡುತ್ತಿರುತ್ತದೆ.)

ತಾನು ನೋಡುವ ಪದಾರ್ಥಗಳನ್ನು, ಗ್ರಹಿಸುವ ಗಂಧವನ್ನು, ರುಚಿಯನ್ನು, ಕೇಳುವ ಧ್ವಗಳನ್ನು, ಒಳ್ಳೆಯ, ಕೆಟ್ಟ ಬಣ್ಣಗಳನ್ನು ಮಗುವು ತನ್ನ ತಾಯ್ನುಡಿಯ ಮೂಲಕವೇ ಹೆಸರಿಸಲು ಕಲಿಯುತ್ತದೆ  ಎನ್ನುತ್ತಾನೆ ಸ್ಯಾಡ್ಲರ್.  ಆದ್ದರಿಂದ ಪ್ರತಿಯೊಂದು ಮಗುವಿನ ಬುದ್ಧಿವಿಕಾಸ ಹಾಗೂ ಭಾವಪ್ರಕಾಶದ ದೃಷ್ಟಿಯಿಂದ ಮಾತೃಭಾಷಾ ಬೋಧನೆ ಆಗಬೇಕು.
ಕವಿ ಜಾನ್ ಡನ್ನ ಪ್ರಕಾರ ನಾವು ಯಾರೂ ನಡುಗಡ್ಡೆಗಳಲ್ಲ. ನಮ್ಮ ಸುತ್ತ ಒಂದು ಸಾಂಸ್ಕೃತಿಕ ಆವರಣ ಇದೆ. ಪ್ರತಿಯೊಂದು ಸಂಸ್ಕೃತಿಯಲ್ಲೂ ನೂರಾರು ಆಚರಣೆಗಳು, ವಿಧಿ ನಿಷೇಧಗಳು, ಕಟ್ಟುಕಟ್ಟಳೆಗಳು, ಮಡಿಮೈಲಿಗೆಗಳು ಇದ್ದೇ ಇರುತ್ತವೆ. ಭಾಷೆ ಒಂದು ಸಾಂಸ್ಕೃತಿಕ ಅನುಭವ.  ಅದು ಕರ್ತೃ ಕರ್ಮ ಕ್ರಿಯೆಯಲ್ಲ.  (ಬಿ. ವಿ. ಕಾರಂತ). ಭಾಷೆಯ ಮೂಲಕ ಸಂಸ್ಕೃತಿಯನ್ನು ತಿಳಿಯಬಹುದು. ಆದ್ದರಿಂದ ಭಾಷೆ ನಶಿಸಿದರೆ ಸಂಸ್ಕೃತಿ  ನಾಶವಾದಂತೆ ಎಂಬ ಅನಂತಮೂರ್ತಿಯವರ ಮಾತು ಮೌಲಿಕವಾಗಿದೆ. ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ರವಾಸುವ ದೃಷ್ಟಿಯಿಂದ ತಾಯ್ನುಡಿ ಬೋಧನೆ ಮಾಡುವುದು ಅವಶ್ಯ. ಏಕೆಂದರೆ ಯಾವುದೇ ಶಿಕ್ಷಣದ ಅಂತಿಮ ಗುರಿ ಮನುಷ್ಯನನ್ನು ಹೆಚ್ಚು ಸಂಸ್ಕೃತಿವಂತನನ್ನಾಗಿಸುವುದು, ಮಾನವೀಯಗೊಳಿಸುವುದು.  ಮಾತೃಭಾಷಾ ಬೋಧನೆ ಈ ಗುರಿಸಾಧನೆಗೆ ಪೂರಕವಾಗಿದೆ.

ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ವಯಸ್ಕ ಮತದಾರಗೆ ರಾಜ್ಯಾಡಳಿತ ಮತ್ತು ರಾಷ್ಟ್ರದ ಸಾಮಾಜಿಕ ಆರ್ಥಿಕ ಅಭಿವೃದ್ಧಿಯಲ್ಲಿ ಪಾಲ್ಗೊಳುವ ಅವಕಾಶಗಳು ಲಭಿಸಬೇಕು (ಡಿ.ಪಿ ಪಟ್ಟನಾಯಕ್) ಹಾಗಾದಾಗಲೆ ಭಾಗಿತ್ವದ ಪ್ರಜಾಪ್ರಭುತ್ವ ಎಂಬ ಮಾತಿಗೆ ಬೆಲೆ ಬಂದೀತು. ಪ್ರಜಾಪ್ರಭುತ್ವದಲ್ಲಿ ವಿಚಾರ ವಿಮಯ, ಅಭಿಪ್ರಾಯ-ವಿಚಾರಗಳ ಪ್ರಸ್ತುತೀಕರಣ, ವಾದ ಹಾಗೂ ತರ್ಕಕ್ಕೆ ಮಾತೃಭಾಷೆ/ಪ್ರದೇಶ ಭಾಷೆಯ ಮೇಲೆ ಹಿಡಿತವಿರಬೇಕು.  ಆಡಳಿತಕ್ಕಾಗಿ ಜನರನ್ನು ಹುರಿಗೊಳಿಸುವುದೆಂದರೆ ಅವರ ಭಾಷೆಯನ್ನು ಹುರಿಗೊಳಿಸುವುದೆಂಬ ಮಾತನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತೃಭಾಷಾ ಬೋಧನೆ ಆಗಬೇಕು.

ಭಾಷೆಯ ಮೂರು ಮುಖಗಳು
ಪ್ರತಿಯೊಂದು ಭಾಷೆಗೂ (ಅ) ಲೋಕೋಪಯೋಗಿ (ನಿತ್ಯೋಪಯೋಗಿ) (ಆ) ಭಾವೋಪಯೋಗಿ (ಇ) ಶಾಸ್ತ್ರೋಪಯೋಗಿ ಎಂಬ ಮೂರು ಮುಖಗಳಿವೆ (ಕುವೆಂಪು)
(ಅ) ಸರಳವಾದ ವಿಷಯವನ್ನು  ಸರಳವಾದ ರೀತಿಯಲ್ಲಿ ಹೇಳುವುದಕ್ಕೂ ಸರಳವಾದ ವಿಚಾರವನ್ನು ಸರಳವಾಗಿ ಕೇಳಿ ತಿಳಿಯುವುದಕ್ಕೂ ಸರಳವಾದ ಸಂಗತಿಯನ್ನು ಸರಳವಾಗಿ ಓದುವುದಕ್ಕೂ ಸರಳವಾದ ಅಭಿಪ್ರಾಯಗಳನ್ನು ಸರಳವಾಗಿ ಬರೆಯುವುದಕ್ಕೂ ಕಲಿಸುವುದೇ ಮಾತೃಭಾಷಾ ಬೋಧನೆಯ ಉದ್ದೇಶ  (ಜಿ. ಸ್ಯಾಂಪ್ಸನ್) ಇದು ಭಾಷೆಯ ನಿತ್ಯೋಪಯೋಗದ ಮಾತಾಯಿತು.

(ಆ) ವಿದ್ಯಾರ್ಥಿಗಳ ಅಂತರಂಗದ ಒತ್ತಡ, ಭಾವನೆ, ಕಲ್ಪನೆಗಳಿಗೆ ಸೂಕ್ತ ರಹದಾರಿ ಲಭ್ಯವಾಗಬೇಕು. ಭಾವಪೋಷಣೆ ಹಾಗೂ ಭಾವಾಭಿವ್ಯಕ್ತಿಗೆ ಮಾತೃಭಾಷೆಯೇ ಸೂಕ್ತ ಸಾಧನ. ಸ್ವಯಂ ಅಭಿವ್ಯಕ್ತಿಯು ಆತ್ಮಾನಂದ ಹಾಗೂ ಸಂತಸವನ್ನು ನೀಡುತ್ತದೆ. ಅದು ಮುಂದಿನ ಕ್ರಿಯಾತ್ಮಕತೆಗೆ ಪ್ರಚೋದಕ.  ಆದ್ದರಿಂದ ಸೃಷ್ಟಿಶೀಲತೆಯ ಬೆಳವಣಿಗೆಗಾಗಿ ತಾಯ್ನುಡಿ ಬೋಧನೆ ಆಗಬೇಕು.

(ಇ) ಭಾಷೆಯ ನಿತ್ಯೋಪಯೋಗಿ ಹಾಗೂ ಭಾವೋಪಯೋಗಿ ಆಯಾಮಗಳಷ್ಟೆ ಮಕ್ಕಳಿಗೆ ತಿಳಿದರೆ ಸಾಲದು. ಜ್ಞಾನ ಸ್ಪೋಟಗೊಳ್ಳುತ್ತಿರುವ ಸಂದರ್ಭದಲ್ಲಿ ವಿವಿಧ ಶಾಸ್ತ್ರ ಗ್ರಂಥಗಳಲ್ಲಿ ಬಳಕೆಯಾಗಿರುವ ಭಾಷೆಯ ಸ್ವರೂಪದ ಪರಿಚಯ ಮಕ್ಕಳಿಗೆ ಆಗಬೇಕಾಗಿರುವುದು ಅಗತ್ಯ;  ಮಾತ್ರವಲ್ಲದೆ ನಾಳೆಯ ದಿನ ಸಂದರ್ಭ ಒದಗಿದಾಗ ಈ ತೆರನಾದ ಭಾಷಾ ಪ್ರಯೋಗ ಮಾಡುವುದಕ್ಕೂ ಮಕ್ಕಳನ್ನು ಇಂದೇ ಸಜ್ಜುಗೊಳಿಸುವುದು ಶಾಲೆಗಳ ಕರ್ತವ್ಯವಾಗುತ್ತದೆ. 
ಸಾಹಿತ್ಯವು ಸತ್ಯ ಮತ್ತು ಸೌಂದರ್ಯದ ಸಮಾವೇಶ. ಬಾಳಿನ ಒಳನೋಟಗಳು, ಕಠೋರ ವಾಸ್ತವತೆಯ ದರ್ಶನ, ಭವಿಷ್ಯದ ಬದುಕಿನ ಹೊಳಹು ವ್ಯಕ್ತಿಗೆ ದೊರೆಯುವುದು ಸಾಹಿತ್ಯಾಧ್ಯಯನದಿಂದ. ಮಾತೃಭಾಷಾ ಬೋಧನೆ ಮಕ್ಕಳನ್ನು ಸಾಹಿತ್ಯ ಲೋಕಕ್ಕೆ ಜೀವನದ ಗತಿಬಿಂಬಕ್ಕೆ  ಪರಿಚಯಿಸುತ್ತದೆ;  ಬದುಕಿನ ಅನ್ವೇಷಣೆಗೆ ಹಾದಿ ಮಾಡಿಕೊಡುತ್ತದೆ. ಇದರಿಂದ ಸಂತೋಷ ಪ್ರಾಪ್ತಿಯಾಗುತ್ತದೆ.  ಸಾಹಿತ್ಯಾಸಕ್ತಿ ಹೆಚ್ಚುತ್ತದೆ.  ವಿರಾಮದ ಸದುಪಯೋಗವಾಗುತ್ತದೆ.  ವ್ಯಕ್ತಿತ್ವ ಪರಿಷ್ಕಾರಗೊಳ್ಳುತ್ತದೆ. ಉತ್ತಮ ವ್ಯಕ್ತಿತ್ವದ ಮಾದರಿಗಳು ಲಭಿಸಿ ಒಳ್ಳೆಯ ಮೌಲ್ಯಗಳ ವರ್ಧನೆಯಾಗುತ್ತದೆ.  ಹೀಗಾಗಿ ಸಾಹಿತ್ಯ ಪರಂಪರೆಯ ಪರಿಚಯ, ಕವಿ, ಕಲಾವಿದರನ್ನು ಕುರಿತು ಅಭಿಮಾನ, ಜನರ ರೀತಿತಿ ಹಾಗೂ ಜೀವನಕ್ರಮವನ್ನು ಕುರಿತು ಒಲವು ಮೂಡಿಸುವುದೇ ಮಾತೃಭಾಷಾ ಬೋಧನೆಯ ಉದ್ದೇಶ.

ಮನುಷ್ಯ ಜೀವನದಲ್ಲಿ ರೂಪ ಸಾಮಂಜಸ್ಯಕ್ಕೆ  ವಿಶಿಷ್ಟ ಸ್ಥಾನವಿದೆ.  ಇದನ್ನೇ ಶಿಲ್ಪಿ ತನ್ನ ಕೆತ್ತನೆಯಲ್ಲಿ, ಕಲಾವಿದ ತನ್ನ ರೇಖೆಗಳಲ್ಲಿ ಅರಳಿಸುವಂತೆ, ಸಾಹಿತಿ ತನ್ನ ಕೃತಿಗಳಲ್ಲಿ ಪ್ರದರ್ಶಿಸುತ್ತಾನೆ.  ಆತ ತಾನು ಆಯ್ದುಕೊಂಡ ವಸ್ತುವಿಗೆ ತಕ್ಕ ಆಕಾರ ಕೊಡುತ್ತಾನೆ.  ತಾಯ್ನುಡಿ ಬೋಧನೆಯ ಮುಖ್ಯ ಉದ್ದೇಶ ಈ ಪ್ರಮಾಣಬದ್ಧತೆಯ ಅರಿವು ಮೂಡಿಸುವುದು. ಪ್ರಮಾಣಬದ್ಧತೆಯಿಂದಾಗಿ ಔಚಿತ್ಯಪ್ರಜ್ಞೆ ಮೂಡುತ್ತದೆ. ಅಕ್ಷರ ಸೌಂದರ್ಯದ ಮಹತ್ವ ತಿಳಿಯುತ್ತದೆ.  ಮಾತು ಮತ್ತು ಬರೆಹದಲ್ಲಿ ಕಂಡುಬರುವ ಅವ್ಯಾಪ್ತಿ-ಅತಿವ್ಯಾಪ್ತಿ ದೋಷವನ್ನು ನಿವಾರಿಸಬಹುದು. ಆಲೋಚನೆ, ಮಾತು ಹಾಗೂ ಬರೆಹದಲ್ಲಿ ಸಾವಯವ ಶಿಲ್ಪದ ಮಹತ್ವ ಅರಿವಿಗೆ ಬರುತ್ತದೆ. 

ಜಾರ್ಜ್ ಆರ್ವೆಲ್ ರಾಜಕೀಯ ಮತ್ತು ಭಾಷೆ ಎಂಬ ಲೇಖನದಲ್ಲಿ ಎತ್ತುವ ಈ ಪ್ರಶ್ನೆಗಳನ್ನು ಭಾಷೆಯನ್ನು ಬಳಸುವವರೆಲ್ಲ ಗಂಭೀರವಾಗಿ ಪರಿಶೀಲಿಸಬೇಕು; ತಾಯ್ನುಡಿ ಬೋಧಕರೂ ಪರಿಗಣಿಸಬೇಕು.
* ನಾನು ಏನು ಹೇಳಲು ಪ್ರಯತಿಸುತ್ತಿದ್ದೇನೆ?
* ಯಾವ ಪದಗಳು ಇದನ್ನು ಅಭಿವ್ಯಕ್ತಿಸುತ್ತವೆ.
* ಯಾವ ಪ್ರತಿಮೆ-ನುಡಿಗಟ್ಟು ಇದನ್ನು ಸ್ಪಷ್ಟಪಡಿಸುತ್ತದೆ? ಬಳಸಿದ ನುಡಿಗಟ್ಟು - ಪ್ರತಿಮೆ ಪ್ರಭಾವಶಾಲಿಯಾಗಿದೆಯೆ?
* ಇನ್ನೂ ಚುಟುಕಾಗಿ ಹೇಳಲು ಸಾಧ್ಯವೆ? ಯಾವುದನ್ನಾದರೂ ಕಿತ್ತುಹಾಕಬಹುದೇ?

ತಾಯ್ನುಡಿಯು ಅಭಿವ್ಯಕ್ತಿಯ ಪ್ರಮುಖ ಮಾಧ್ಯಮ. 
ವಿದ್ಯಾರ್ಥಿಗಳು ಅತ್ಯಂತ ಸಮರ್ಥವಾಗಿ ತಮ್ಮ ತಾಯ್ನುಡಿಯಲ್ಲಿ ತಮ್ಮ ಭಾವನೆ, ವಿಚಾರ, ಕಲ್ಪನೆಗಳನ್ನು ಪ್ರಕಟಪಡಿಸುವ ಶಕ್ತಿಗಳಿಸಬೇಕು..  ಆದ್ದರಿಂದಲೆ ತಾಯ್ನುಡಿ ಬೋಧನೆಯ ಮೂಲಕ ಈ ಕೆಲವು ಸಾಮರ್ಥ್ಯಗಳನ್ನು ಬೆಳೆಸಬೇಕು.
(ಅ) ಉಪನ್ಯಾಸಗಳಿಂದ ಮತ್ತು ವಿವಿಧ ಗ್ರಂಥಗಳಿಂದ ವಿಚಾರಗಳನ್ನು ಸಂಗ್ರಹಿಸಿ ಬಳಸಿಕೊಳ್ಳುವ ಶಕ್ತಿ.
(ಆ) ಮೌಖಿಕ ಹಾಗೂ ಲಿಖಿತ ರೂಪದಲ್ಲಿ ವಿಷಯಗಳ ಪರಿಣಾಮಕಾರಿ ಅಭಿವ್ಯಕ್ತಿ.
(ಇ) ಸಂದರ್ಶನಗಳನ್ನು ಯಶಸ್ವಿಯಾಗಿ ಎದುರಿಸುವ ಮತ್ತು ಗುಂಪು ಚರ್ಚೆಗಳಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುವ 
    ಸಾಮರ್ಥ್ಯ.
(ಈ) ವಿವಿಧ ಭಾಷಾಶೈಲಿಗಳ ಹಾಗೂ ಭಾಷೆಯ ವಿವಿಧ ಪ್ರಾದೇಶಿಕ ರೂಪಗಳ ಪರಿಚಯ.
(ಉ) ಭಾಷಾಂತರ ಸಾಮರ್ಥ್ಯ.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಹಾಗೂ ಮಾತೃಭಾಷಾ ಶಿಕ್ಷಣ
2005ರಲ್ಲಿ ಕೇಂದ್ರ ಸರಕಾರ ಪ್ರಕಟಿಸಿದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ದೇಶದ ವಿವಿಧ ರಾಜ್ಯಗಳಲ್ಲಿನ ಶಾಲಾ ಶಿಕ್ಷಣಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸಿದೆ.  ಈ ಪಠ್ಯಕ್ರಮ ಚೌಕಟ್ಟಿಗೆ ಅನುಗುಣವಾಗಿ  ವಿವಿಧ ರಾಜ್ಯಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಪುನಾರಚಿಸಲಾಗಿದೆ.  ಈ ಚೌಕಟ್ಟು ಭಾಷೆಗಳು ಹಾಗೂ ಭಾಷಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಒಳನೋಟಗಳನ್ನು ಒದಗಿಸಿದೆ.  ಭಾಷಾ ಶಿಕ್ಷಣಕ್ಕೆ  ಸಂಬಂಧಿಸಿದ ಮುಖ್ಯಾಂಶಗಳನ್ನು ಇಲ್ಲಿ ಕ್ರೋಡೀಕರಿಸಿದೆ. 
* ತ್ರ್ರಿಭಾಷಾ ಸೂತ್ರವನ್ನು ಬಹುಭಾಷಿಕ ಪರಿಸರದಲ್ಲಿ ಅದರ ಅಂತಃಸತ್ವದೊಂದಿಗೆ ಜಾರಿಗೆ ಕೊಡಬೇಕಾಗಿದೆ.  ತ್ರಿಭಾಷಾ ಸೂತ್ರವು ರಾಷ್ಟ್ರೀಯ ಸಾಮರಸ್ಯ ಹಾಗೂ ಬಹುಭಾಷಿಕತೆಯನ್ನು ರೂಢಿಸಬೇಕಾಗಿದೆ.
* ಭಾಷಾ ಬೋಧನೆಯು ಬಹುಭಾಷಿಕವಾಗಿರಬೇಕು. ಬಹುಭಾಷಿಕ ತರಗತಿಯ ಪರಿಸರವನ್ನು ಬೋಧನ ಸಂಪನ್ಮೂಲವಾಗಿ ಸ್ವೀಕರಿಸಬೇಕು.
* ಮಕ್ಕಳ ಮನೆಯ ಮಾತುಗಳನ್ನು ಕಡೆಗಣಿಸದೆ ಬೋಧನೆ-ಕಲಿಕೆಯ ಮಾಧ್ಯಮವಾಗಿ ಬಳಸಬಹುದು.  ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳ ಮನೆಯ ಮಾತಲ್ಲೇ ಶಿಕ್ಷಣ ನೀಡುವ ವ್ಯವಸ್ಥೆಯಿರಬೇಕು.  ಭಾಷಾ ಅಲ್ಪಸಂಖ್ಯಾತ ಗುಂಪುಗಳಿಗೆ ಅವರವರ ಮಾತೃಭಾಷೆಯಲ್ಲೇ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ನೀಡಬೇಕು. ಸಂವಿಧಾನದ 350ಏ ಕಲಮು ಇದಕ್ಕೆ ಅವಕಾಶ ಕಲ್ಪಿಸಿದೆ.
* ತ್ರಿಭಾಷಾ ಸೂತ್ರದ ಪ್ರಕಾರ ಹಿಂದಿಯೇತರ ರಾಜ್ಯಗಳಲ್ಲಿ ಮಕ್ಕಳು ಹಿಂದಿಯನ್ನು ಒಂದು ಭಾಷೆಯನ್ನಾಗಿ ಕಲಿತರೆ, ಹಿಂದಿ ಪ್ರಾಂತ್ಯದಲ್ಲಿ ಮಕ್ಕಳು ತಮ್ಮ ಪ್ರದೇಶದಲ್ಲಿ ರೂಢಿಯಲ್ಲಿ ಇರದ ಭಾಷೆಯನ್ನೂ ಕಲಿಯಬೇಕು. ಸಂಸ್ಕೃತವನ್ನು ಕೂಡ ಒಂದು ಆಧುನಿಕ ಭಾರತೀಯ ಭಾಷೆಯನ್ನಾಗಿ ಈ ಭಾಷೆಗಳ ಜೊತೆ ಕಲಿಯಬಹುದು.  ಮುಂದುವರಿದ ಹಂತಗಳಲ್ಲಿ ಅಭಿಜಾತ ಮತ್ತು ವಿದೇಶಿ ಭಾಷೆಗಳ ಅಧ್ಯಯನ ಮಾಡಬಹುದು.

ಮನೆಯ ಮಾತು/ಪ್ರಥಮ ಭಾಷೆ/ಮಾತೃಭಾಷಾ ಶಿಕ್ಷಣ
ಮಕ್ಕಳು ಶಾಲೆಗೆ ಬರುವಾಗಲೇ ತಮ್ಮ ಭಾಷೆಗಳಲ್ಲಿ ಮಾತನಾಡುವ ಪರಿಣತಿಯೊಂದಿಗೆ ಬರುತ್ತಾರೆ. ಅವರ ಶಬ್ದಭಂಡಾರ ತಕ್ಕಮಟ್ಟಿಗೆ ಶ್ರೀಮಂತವಾಗಿರುತ್ತದೆ. ಧ್ವನಿ, ಪದಗಳು, ವಾಕ್ಯಗಳು ಹಾಗೂ ವಿಚಾರಗಳಿಗೆ ಸಂಬಂಧಿಸಿದಂತೆ ಭಾಷಿಕ ಯಮಗಳ ಪ್ರಜ್ಞೆಯನ್ನು ಅವರು ಹೊಂದಿರುತ್ತಾರೆ. ಮಗು ಚೆನ್ನಾಗಿ ಮಾತನಾಡುವುದು ಮಾತ್ರವಲ್ಲದೆ ಚೆನ್ನಾಗಿ ಆಲೋಚಿಸುವುದನ್ನು ತಿಳಿದಿರುತ್ತದೆ.  ಹೀಗಾಗಿ ಶಾಲೆಗಳಲ್ಲಿ ಈ ಭಾಷಾ ಕೌಶದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು. ಮಕ್ಕಳ ಬೌದ್ಧಿಕ ಹಾಗೂ ಸಂವಹನಾತ್ಮಕ ಸಾಮರ್ಥ್ಯವನ್ನು ಬೆಳೆಸುವುದು ಪ್ರಥಮ ಭಾಷೆ/ ಮಾತೃಭಾಷಾ ಶಿಕ್ಷಣದ ಪ್ರಥಮ ಗುರಿ.
* ಮೂರನೆ ತರಗತಿಯಿಂದ ಮೊದಲ್ಗೊಂಡು ಮೌಖಿಕಾಭಿವ್ಯಕ್ತಿ ಹಾಗೂ ಸಾಕ್ಷರತಾ ಕೌಶಲಗಳಿಗೆ, ಸಂವಹನ ಸಾಮರ್ಥ್ಯ ಮತ್ತು ಚಿಂತನ ಕೌಶಲಗಳಿಗೆ ಒತ್ತು ಡಬೇಕು.
* ಪ್ರಾಥಮಿಕ ಹಂತದಲ್ಲಿ ಮಕ್ಕಳ ಭಾಷೆಗಳನ್ನು ಶಿಕ್ಷಕರು ಯಥಾವತ್ತಾಗಿ ಸ್ವೀಕರಿಸಬೇಕು. ಅವನ್ನು ತಿದ್ದಲು ಹೋಗಬಾರದು. ನಾಲ್ಕನೆಯ ತರಗತಿಯಿಂದ ಮುಂದೆ ಮಗು ಪ್ರಮಾಣಬದ್ಧ ಭಾಷೆ ಹಾಗೂ ಬರವಣಿಗೆಯನ್ನು ಸರಿಯಾಗಿ ಕಲಿಯುತ್ತದೆ. ಆದರೆ ಮಗುವಿನ ಮನೆಯ ಮಾತುಗಳನ್ನು, ಭಾಷೆಗಳನ್ನು ಗೌರವಿಸಬೇಕು. ಕಲಿಕೆಯ ಪ್ರಕ್ರಿಯೆಯಲ್ಲಿ ತಪ್ಪುಗಳಾಗುವುದು ಸಹಜ ಮತ್ತು ಮಕ್ಕಳು ತಾವಾಗಿಯೇ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬ ಅರಿವು ಶಿಕ್ಷಕರಿಗೆ ಇರಬೇಕು.  ಕ್ಲಿಷ್ಟ ವಿಷಯಗಳು ಹಾಗೂ ತಪ್ಪುಗಳ ಬಗ್ಗೆಯೇ ಶಿಕ್ಷಕರು ತಮ್ಮ ಗಮನ ಕೇಂದ್ರೀಕರಿಸದೇ ಅರ್ಥಪೂರ್ಣವಾದ, ಆಸಕ್ತಿದಾಯಕವಾದ ಸವಾಲಿನ ಭಾಷಾ ಚಟುವಟಿಕೆಗಳನ್ನು ಹಾಗೂ ಅನುಭವವನ್ನು ಒದಗಿಸುವುದು ಸೂಕ್ತ.
*  ಶಾಲಾಹಂತದಲ್ಲಿ ಮಾತೃಭಾಷೆ, ಮನೆಯ ಮಾತಿನಲ್ಲಿ ಭಾಷಾ ಕೌಶಲಗಳ ಕಲಿಕೆಗೆ ಆಧ್ಯತೆ ನೀಡಬೇಕು.

 

 

 

 

 

 

 

 

ಡಾ: ಮಹಾಬಲೇಶ್ವರ ರಾವ್
ಪ್ರಾಚಾರ್ಯರು,ಡಾ: ಟಿ.ಎಂ.ಎ.ಪೈ ಶಿಕ್ಷಣ ಕಾಲೇಜು,
ಉಡುಪಿ - 2