Print

ಯಾವುದೇ ಭಾಷೆ ಉಳಿದು ಬೆಳೆಯಬೇಕಾದರೆ ಆ ಭಾಷೆಯನ್ನು ಶಾಲೆಯಲ್ಲಿ ಉತ್ತಮ ಗುಣಮಟ್ಟದೊಡನೆ ಕಲಿಯುವ ಅವಕಾಶವಿರಬೇಕು. ಕೊಂಕಣಿಗರು ಶಾಲೆಗಳಲ್ಲಿ ಕೊಂಕಣಿ ಕಲಿಕೆ ಬಗ್ಗೆ ತಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸುತ್ತಿದ್ದಾರೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯನ್ನು  ಕಲಿತರೆ ಅದರ ಭಾಷಿಕ ಪ್ರಯೋಜನಗಳು ಕೊಂಕಣಿಗೆ ದೊರೆಯುತ್ತವೆ. ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಕಾಡೆಮಿಯು ಆಯೋಜಿಸಿದ ಕೊಂಕಣಿ ಜಾಗೃತಿ ಅಭಿಯಾನಕ್ಕೆ ಶುಭ ಹಾರೈಸುತ್ತೇನೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮೊಸೆಸ್ ಜಯಶೇಖರ್  ಇವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಪ್ರಚಾರ ಸಂಚಾಲನದ   ಸಹಕಾರದಲ್ಲಿ ಅಯೋಜಿಸಿದ ಕೊಂಕಣಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡುತ್ತ ಕಾರ್ಯಕ್ರಮವನ್ನು ಅಭಿನಂದಿಸಿದರು.

 ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ಟೆಲಿನೊ ಇವರು ಕೊಂಕಣಿ ಕಲಿಕೆಯನ್ನು  ದಕ್ಷಿಣ ಕನ್ನಡ, ಉಡುಪಿ,ಉತ್ತರಕನ್ನಡದ ಶಾಲೆಗಳಲ್ಲಿ ವಿಸ್ತರಿಸುವ ಬಗ್ಗೆ ಈ ಅಭಿಯಾನವನ್ನು ಆಯೋಜಿಸಲಾಗಿದೆ.  ಸುಮಾರು ೪೦ ಸ್ಥಳಗಳಲ್ಲಿ ಈ ಅಭಿಯಾನ ನಡೆಯಲಿದ್ದು, ಜನರಿಗೆ ಕೊಂಕಣಿ ಶಿಕ್ಷಣದ ಮಹತ್ವದ ಬಗ್ಗೆ, ಮನವರಿಕೆ ಮಾಡಲಾಗುವುದೆಂದು ಹೇಳಿದರು.

 ವೇದಿಕೆಯಲ್ಲಿ ಪ್ರಚಾರ ಸಂಚಾಲನದ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಅಲ್ವಾರಿಸ್, ಕಲಾಕುಲ್ ನಾಟಕ ರೆಪರ್ಟರಿಯ ಸಂಚಾಲಕ ಶ್ರೀ ಅರುಣ್ ರಾಜ್ ರೊಡ್ರಿಗಸ್ ಹಾಗೂ ರಿಜಿಸ್ಟ್ರಾರ್ ಡಾ.ಬಿ.ದೇವದಾಸ ಪೈ ಉಪಸ್ಥಿತರಿದ್ದರು. ಸದಸ್ಯ ಸಂಚಾಲಕ ಶ್ರೀ ಲಾರೆನ್ಸ್ ಡಿಸೊಜಾ ಕಾರ್ಯಕ್ರಮ ನಿರ್ವಹಿಸಿ, ಶ್ರೀ ವಿಕ್ಟರ್ ಮಥಾಯಸ್ ವಂದಿಸಿದರು.

ನಂತರ ಕಲಾಕುಲ್ ನಾಟಕ ರೆಪರ್ಟರಿ ಪಂಗಡದವರಿಂದ ಕ್ರಿಸ್ಟೋಫರ್ ಡಿಸೊಜ ನಿನಾಸಂ ಇವರು ನಿರ್ದೇಶಿಸಿದ ಅಭಿಯಾನದ ಕಿರು ನಾಟಕ ಬದ್ಲಾವಣ್ ಪ್ರದರ್ಶನಗೊಂಡಿತು.