2014 ಮಾಯ್ 06 ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿಚ್ಯಾ ಸಭಾಸಾಲಾಂತ್ ಅಕಾಡೆಮಿ ಅಧ್ಯಕ್ಷ್ ರೊಯ್ ಕ್ಯಾಸ್ತಲಿನೊ ಹಾಣಿ ಫುಡ್ಲ್ಯಾ ತೀನ್ ವರ್ಸಾಂನಿ ಕರ್ಯೆತ್ ಜಾಲ್ಲ್ಯಾ ವಾವ್ರಾಚೊ ವಿವರ್ ಪತ್ರ್-ಕಾರಾಂಕ್ ದಿಲೊ. ಹ್ಯಾ ಪತ್ರಿಕಾ ಗೋಷ್ಟಿಂತ್ ಅಕಾಡಮಿ ಸಾಂದೆ ಆನಿ ರಿಜಿಸ್ಟ್ರಾರ್ ಹಾಜರ್ ಆಸ್ ಲ್ಲೆ.

 

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮುಂದಿನ ಮೂರು ವರ್ಷಗಳ ಕ್ರಿಯಾ ಯೋಜನೆ ಬಗ್ಗೆ, ಅಕಾಡೆಮಿಯನ್ನು ಜನರ ಬಳಿ ತಲುಪಿಸುವ ಕಾರ್ಯಕ್ರಮಗಳ ಬಗ್ಗೆ ತಮಗೆ ಮಾಹಿತಿ ನೀಡಲು ಈ ಪತ್ರಿಕಾ ಗೋಷ್ಟಿಯನ್ನು ಆಯೋಜಿಸಲಾಗಿದೆ.

ಯಾವ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಜತೆಯಲ್ಲಿ ಅಭಿವೃದ್ಧಿ ಹೊಂದುತ್ತವೊ ಆ ಭಾಷೆಗಳು ಬೆಳೆಯುತ್ತವೆ. ಆದುದರಿಂದ  ಕೊಂಕಣಿ ಶಿಕ್ಷಣ-ಕೊಂಕಣಿ ಸಾಹಿತ್ಯ-ಕೊಂಕಣಿ ಸಂಸ್ಕೃತಿ ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಪ್ರಸ್ತುತ ಅಕಾಡೆಮಿಯ ಉದ್ದೇಶ.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೊಂಕಣಿ ಶಿಕ್ಷಣ: ಜಾಗತೀಕರಣದ ಭರಾಟೆಯಲ್ಲಿ, ಕೊಂಕಣಿಯ ಅಸ್ಮಿತೆಯನ್ನು ಉಳಿಸಲು ಕೊಂಕಣಿ ಭಾಷೆ ಉಳಿಯಲು, ಬೆಳೆಯಲು ಇಂದಿನ ಮಕ್ಕಳು ಕೊಂಕಣಿಯನ್ನು ಶಾಲೆಗಳಲ್ಲಿ ಕಲಿಯುವ ತುರ್ತು ಅಗತ್ಯವಿದೆ. ಅಕಾಡೆಮಿಯ ಹಿಂದಿನ ಅಧ್ಯಕ್ಷರುಗಳ ಕಾಲದಲ್ಲಿ ಈ ಪ್ರಕ್ರಿಯೆ ಆರಂಭಗೊಂಡು,  ಶ್ರೀ ಎರಿಕ್ ಒಝೇರಿಯೊರವರ ಕಾಲದಲ್ಲಿ ಕೊಂಕಣಿ ಅಕಾಡೆಮಿಯು ಶಾಲೆಗಳಲ್ಲಿ ಕೊಂಕಣಿ ಕಲಿಕೆ ಬಗ್ಗೆ (2005-06) ತುಂಬಾ ಮುತುವರ್ಜಿ ವಹಿಸಿದ ಕಾರಣ ಆ ಸಾಲಿನಲ್ಲಿ ಪ್ರಾಯೋಗಿಕ ಶಿಕ್ಷಣ ನಡೆಯಿತು. ಪರಿಣಾಮ,  ಕರ್ನಾಟಕ ಸರಕಾರವು 2007 ಇಸವಿಯಿಂದ, ತೃತೀಯ ಭಾಷೆಯಾಗಿ ಆರನೇ ತರಗತಿಯಿಂದ ಕೊಂಕಣಿಯನ್ನು ಕಲಿಯುವ ಅವಕಾಶವನ್ನು ನೀಡಿತು.

ಕೊಂಕಣಿ ಕಲಿಕೆಗೆ ನಿರಂತರತೆ ದೊರೆಯಲು ಕೊಂಕಣಿ ಪ್ರಚಾರ ಸಂಚಾಲನದ ಶ್ರಮ ಕಾರಣ. ಪ್ರಸ್ತುತ ಕನ್ನಡ ಲಿಪಿಯಲ್ಲಿ 56 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 16 ಪ್ರೌಢಶಾಲೆಗಳು ಕೊಂಕಣಿ ಕಲಿಕೆಗೆ ಅವಕಾಶ ನೀಡಿವೆ. ಮೂರು ವರ್ಷಗಳಿಂದ  8 ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ಅಧಿಕೃತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಕೊಂಕಣಿ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಮೋಹನ್ ಪೈ ಇವರ ಮುತುವರ್ಜಿಯಿಂದ ದೇವನಾಗರಿ ಲಿಪಿಯಲ್ಲಿ 13 ಶಾಲೆಗಳು ಕೊಂಕಣಿ ಕಲಿಕೆಗೆ ಅವಕಾಶ ನೀಡಿವೆ. ವಿಶ್ವ ಕೊಂಕಣಿ ಕೇಂದ್ರವು ಈ ಶಾಲೆಗಳಿಗೆ ಬೆನ್ನೆಲುಬಾಗಿ ನಿಂತಿದೆ.

ಕೊಂಕಣಿ ಶಿಕ್ಷಣವು ಇಂದಿನ ಮತ್ತು ಹಿಂದಿನ ಪೀಳಿಗೆಯನ್ನು ಜೋಡಿಸುವ ಸೇತುವೆಯಂತೆ ಕೆಲಸ ಮಾಡುತ್ತದೆ. ಸಾಹಿತಿಗಳ ಸಾಹಿತ್ಯಕ್ಕೆ ಹೊಸ ಓದುಗರನ್ನು ಕೊಂಕಣಿ ಕಲಿಕೆ ಒದಗಿಸುತ್ತದೆ.

ಕೊಂಕಣಿ ಜಾಗೃತಿ ಅಭಿಯಾನ: ಕೊಂಕಣಿ ಕಲಿಕೆ ಬಗ್ಗೆ ಜನರಿಗೆ ಮಾಹಿತಿ ಮತ್ತು ಜಾಗೃತಿ ನೀಡುವ ಅಭಿಯಾನವನ್ನು ಅಕಾಡೆಮಿಯು ಕೊಂಕಣಿ ಪ್ರಚಾರ ಸಂಚಾಲನದ ಸಹಕಾರದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆಸುತ್ತಿದೆ. ಕೊಂಕಣಿಯ ನಾಟಕ ರೆಪರ್ಟರಿಯಾದ ಕಲಾಕುಲ್ ತಂಡದಿಂದ ಬೀದಿ ನಾಟಕದ ಮೂಲಕ ಅಭಿಯಾನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಈ ವರ್ಷ ಉತ್ತರ ಕನ್ನಡದಲ್ಲೂ ನಡೆಸುತ್ತಿದೆ.

ಪಿಯುಸಿಯಲ್ಲಿ ಕೊಂಕಣಿ: ಸರಕಾರವು ಪಿಯು ಮಟ್ಟದಲ್ಲಿ ಕೊಂಕಣಿ ಕಲಿಕೆಗೆ ಅನುಮತಿ ನೀಡುವ ಅಗತ್ಯವಿದೆ. ಈ ಬಗ್ಗೆ ನಮ್ಮ ರಿಜಿಸ್ಟ್ರಾರ್ ಡಾ ದೇವದಾಸ್ ಪೈ ಕಳೆದ ಎರಡು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದಾರೆ. ಪಠ್ಯಕ್ರಮ ತಯಾರಿ ಕೂಡಾ ನಡೆಯುತ್ತಿದೆ. ಅದೇ ರೀತಿ ಡಿ.ಎಡ್/ಬಿ.ಎಡ್ ಶಿಕ್ಷಣದಲ್ಲಿ ಕೊಂಕಣಿಯನ್ನು ಸೇರ್ಪಡೆಗೊಳಿಸುವ ಕೆಲಸ ಆಗಬೇಕಾಗಿದೆ.

ಕಾಲೇಜಿನಲ್ಲಿ ಕೊಂಕಣಿ: ಕಳೆದ 20 ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಕೊಂಕಣಿ ಕಲಿಸಲಾಗುತ್ತಿದೆ. ಈ ವರ್ಷದಿಂದ ರೊಸಾರಿಯೊ, ಪಾದುವಾ ಮತ್ತು ಕಿರೆಂ-ಐಕಳ ಕಾಲೇಜುಗಳಲ್ಲಿ ಪದವಿಯಲ್ಲಿ ದ್ವೀತೀಯ ಭಾಷೆಯಾಗಿ ಕೊಂಕಣಿ ಕಲಿಸುವ ವ್ಯವಸ್ಥೆ ನಡೆಯುತ್ತಿದೆ.

ಕೊಂಕಣಿ ಶಿಕ್ಷಕರ ನೇಮಕಾತಿ: ಕೊಂಕಣಿ ಕಲಿಕೆಯು ತನ್ನ ಅಂತಿಮ ಗುರಿ ತಲುಪಲು ಕೊಂಕಣಿಗೆ ಶಿಕ್ಷಕರನ್ನು ನೇಮಕಗೊಳಿಸುವುದು ಅಗತ್ಯವಾಗಿದೆ. ಈ ಬಗ್ಗೆ ಪೂರಕ ಕೆಲಸಗಳನ್ನು ಅಕಾಡೆಮಿ ವತಿಯಿಂದ ಮಾಡುವ ಯೋಜನೆಯಿದೆ. ಅದುವರೆಗೆ, ಪ್ರಸ್ತುತ ಕೊಂಕಣಿ ಕಲಿಸುವ ಶಿಕ್ಷಕರಿಗೆ ಗೌರವ ಸಂಭಾವನೆ ನೀಡುವುದು. ಪಠ್ಯಪುಸ್ತಕಗಳನ್ನು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸುವುದು. ಕೊಂಕಣಿ ಉಳಿದು ಬೆಳೆಯಲು ಕೊಂಕಣಿ ಶಿಕ್ಷಣ ಅಗತ್ಯವಾದುದರಿಂದ ಅಕಾಡೆಮಿಯು ಈ ಜವಾಬ್ದಾರಿಯನ್ನು ಹೊತ್ತುಹೊಂಡು ಸರಕಾರ ಮತ್ತು ಸಮಾನ ಮನಸ್ಕ ಸಂಘಟನೆಗಳೊಡನೆ ಸೇರಿ ವ್ಯವಸ್ಥಿತವಾಗಿ ಈ ಕೆಲಸಗಳನ್ನು ಮಾಡಬಹುದು.

ಶಾಲಾ ಕಾಲೇಜುಗಳಲ್ಲಿ ಕೊಂಕಣಿ ಕ್ಲಬ್: ಶಾಲಾ ಕಾಲೇಜು ಮಟ್ಟದಲ್ಲಿ ಕೊಂಕಣಿ ಕ್ಲಬ್ ಆರಂಭಿಸಿ ವಿದ್ಯಾರ್ಥಿಗಳಿಗೆ ಸಾಹಿತಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯಿದೆ. ಅದೇ ರೀತಿ ಕೊಂಕಣಿ ಮಾನ್ಯತಾ ದಿನಾಚರಣೆ ಮೂಲಕ ವಿವಿಧ ಸ್ಪರ್ಧೆಗಳನ್ನಿಟ್ಟು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರೆ ಅವರಿಗೆ ಕೊಂಕಣಿ ಬಗ್ಗೆ ಮಾಹಿತಿ, ಜಾಗೃತಿ ಮತ್ತು ಅಭಿಮಾನ ಮೂಡುತ್ತದೆ.

ಕೊಂಕಣಿ ಡಿಪ್ಲೊಮಾ ಕೋರ್ಸ್: ಆಸಕ್ತರಿಗೆ ಅಕಾಡೆಮಿ ಮುಖಾಂತರ ಕೊಂಕಣಿ ಡಿಪ್ಲೊಮಾ ಕೋರ್ಸ್ ಆರಂಭಿಸುವ ಯೋಜನೆ ಇದೆ. ಈ ಬಗ್ಗೆ ಕೊಂಕಣಿಯ ಭಾಷಾ ವ್ಯಾಕರಣದ ಬಗ್ಗೆ ಪಂಡಿತರಾದ ವಂ ಪ್ರತಾಪ್ ನಾಯ್ಕ್ ಗೋವಾ ಮತ್ತು ವಂ ವಲೇರಿಯನ್ ಫೆರ್ನಾಂಡಿಸ್ ಇವರ ಹಾಗೂ ಇತರ ಕೊಂಕಣಿ ಭಾಷಾ ಪ್ರವೀಣರ ಸಹಕಾರ ಪಡೆಯುತ್ತೇವೆ.

ಕೊಂಕಣಿ ಸಾಹಿತ್ಯ: ಕೊಂಕಣಿಯಲ್ಲಿ ವಿವಿಧ ಪ್ರಕಾರಗಳ, ಗುಣಮಟ್ಟದ ಸಾಹಿತ್ಯವಿದೆ. ಆದರೆ ಸಾಹಿತ್ಯದ ಸಿಂಹಪಾಲು ಕ್ರೈಸ್ತ ಮತ್ತು ಜಿಎಸ್‌ಬಿ ಸಮುದಾಯದವರದು. ಕೊಂಕಣಿಯ ಉಳಿದ ಭಾಷಾ ಪ್ರಬೇಧಗಳು ಸಾಹಿತ್ಯದ ಮುಖ್ಯವಾಹಿನಿಂದ ದೂರ ಉಳಿದಿವೆ. ಅವುಗಳಲ್ಲಿ ಸಿದ್ದಿ, ಕುಡುಮಿ, ಖಾರ್ವಿ, ದೈವಜ್ಞ ಬ್ರಾಹ್ಮಣ, ರಾಜಪುರ್ ಸಾರಸ್ವತ್, ನವಾಯತಿ ಇತ್ಯಾದಿ ಕೆಲವೊಂದಾದರೂ ಸಮುದಾಯಗಳ ಸಾಹಿತ್ಯವನ್ನು ದಾಖಲಿಸಲು ಅಕಾಡೆಮಿ ಮುಂದಾಳತ್ವ ವಹಿಸುತ್ತದೆ. ಸಂಸ್ಕೃತಿ ಮತ್ತು ಜಾನಪದದ ದಾಖಲಾತಿ ಮಾಡಬಹುದು. ಶಾಲೆಗಳಲ್ಲಿ ಕೊಂಕಣಿ ಕಲಿತು ಹೊರಬರುವ ನವಜನಾಂಗಕ್ಕೆ ಈ ಸಾಹಿತ್ಯದ ಅಗತ್ಯ ಇದೆ. ಹೊಸಪುಸ್ತಕ ಪ್ರಕಟನೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಪುಸ್ತಕ ಖರೀದಿ ಮಾಡಿ ಜನರ ಬಳಿ ತಲುಪಿಸುತ್ತದೆ.

ಮೊಬೈಲ್ ಕೊಂಕಣಿ ಬಜಾರ್: ಪುಸ್ತಕಗಳು ಪ್ರಕಟವಾಗುತ್ತಿವೆ ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಓದುಗರ ಪ್ರಮಾಣ ಇಳಿಮುಖವಾಗಿದೆ. ಕೊಂಕಣಿಯಲ್ಲಿ ವ್ಯವಸ್ಥಿತ ಪುಸ್ತಕ ಮಾರುಕಟ್ಟೆಯ ಕೊರತೆಯಿದೆ. ಅಕಾಡೆಮಿಯ ನೇತೃತ್ವದಲ್ಲಿ ‘ಮೊಬೈಲ್ ಕೊಂಕಣಿ ಬಜಾರ್ ಎಂಬ ವಿನೂತನ ಸಂಚಾರಿ ಗ್ರಂಥಾಲಯ ಮತ್ತು ಪುಸ್ತಕ ಮಾರಾಟ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ತಿಂಗಳ ಕೊನೆಗೆ ಈ ಯೋಜನೆ ಜಾರಿಗೆ ಬರಲಿದೆ. ಚಾಲಕ ನಿರ್ವಾಹಕರೊಡಗೂಡಿದ ಒಂದು ವಾಹನದಲ್ಲಿ ಜನರು ಸೇರುವ ಕಡೆ ಹೋಗಿ, ಪುಸ್ತಕಗಳನ್ನು ಧ್ವನಿಸುರುಳಿಗಳನ್ನು ಮಾರಾಟ ಮಾಡುವ ವ್ಯವಸ್ಥೆ ಇದು. ಇದರಿಂದ ಪ್ರಕಟವಾದ ಉತ್ತಮ ಸಾಹಿತ್ಯ ಕೇವಲ ನಗರ ಕೇಂದ್ರಿತ ಮಾರುಕಟ್ಟೆಯಲ್ಲಿ ಉಳಿಯದೇ, ಹಳ್ಳಿಹಳ್ಳಿಗೂ ತಲುಪುತ್ತದೆ.

ಕೊಂಕಣಿ ಸಂಸ್ಕೃತಿ: ಕರ್ನಾಟಕದಲ್ಲಿ ಕೊಂಕಣಿಯಲ್ಲಿ 41 ಭಾಷಾ ಪ್ರಬೇಧದ ಸಮುದಾಯಗಳಿವೆ. ಅಷ್ಟೇ ವೈವಿಧ್ಯಮಯ ವಿವಿಧ ಪ್ರಕಾರಗಳ ಸಂಸ್ಕೃತಿ ಇದೆ. ಇವುಗಳ ಬಗ್ಗೆ ಆಳವಾದ ಅಧ್ಯಯನದ ಅಗತ್ಯವಿದೆ. ಕ್ಷೇತ್ರಕಾರ್ಯ ನಡೆಸಿ ಸಂಸ್ಕೃತಿಯ ದಾಖಲೀಕರಣ ನಡೆಸಿದರೆ, ಹಿಂದುಳಿದ ಕೊಂಕಣಿ ಸಮುದಾಯಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ.

ಕೊಂಕಣಿ ನಾಟಕ ತರಬೇತಿ ಶಿಬಿರಗಳು: ರಾಜ್ಯಾದ್ಯಾಂತ ವಿವಿಧ ಪ್ರಕಾರಗಳ, ಪ್ರಬೇಧಗಳ ಕೊಂಕಣಿ ನಾಟಕಗಳನ್ನು ನಡೆಸುವ, ತರಬೇತಿ ಕಾರ್ಯಾಗಾರಗಳನ್ನು, ನಾಟಕೋತ್ಸವಗಳನ್ನು ಆಯೋಜಿಸುವ ಯೋಜನೆ ಇದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಮತ್ತಿತರ 8 ಜಿಲ್ಲಾ ಕೇಂದ್ರಗಳಿಂದ ತಲಾ 10 ರಂತೆ ರಂಗಾಸಕ್ತ ಜನರಿಗೆ ಮಂಗಳೂರಿನಲ್ಲಿ ತರಬೇತಿ ನೀಡಿ ಅವರ ಜಿಲ್ಲೆಗಳಲ್ಲಿ ನಾಟಕ ರೆಪರ್ಟರಿಗಳನ್ನು ಆರಂಭಿಸಿ, ಅವರು ರಂಗಾಸಕ್ತ ಯುವಜನರಿಗೆ ತರಬೇತಿ ನೀಡಿ ಕೊಂಕಣಿ ನಾಟಕ ಕ್ಷೇತ್ರವನ್ನು ವಿಸ್ತರಿಸಬಹುದಾಗಿದೆ. ಈ ಕೆಲಸದಲ್ಲಿ ಕ್ರಿಸ್ಟೋಫರ್ ನೀನಾಸಂ, ಅರುಣ್ ರಾಜ್ ರೊಡ್ರಿಗಸ್ ಮತ್ತು ಇವರ ಕಲಾಕುಲ್ ನಾಟಕ ರೆಪರ್ಟರಿ ತಂಡದ ಸಹಕಾರ ಪಡೆಯಬಹುದು.

ಕೊಂಕಣಿ ಭವನ: ಕೊಂಕಣಿ ಅಕಾಡೆಮಿ ಈಗ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಸ್ವಂತ ಕಟ್ಟಡ ಹೊಂದುವುದು ಕೊಂಕಣಿಗರ ಕನಸು. ಈ ಬಗ್ಗೆ ಈಗಾಗಲೇ ಮೂಡಾ ಅಧಿಕಾರಿಗಳ ಬಳಿ ಮಾತುಕತೆ ನಡೆಸಲಾಗಿದೆ. ಉರ್ವಾ ಸ್ಟೋರ್ ಅಥವಾ ಉರ್ವಾ ಮಾರ್ಕೆಟ್ ಬಳಿ ಆರಂಭವಾಗಲಿರುವ ಮೂಡಾದ ನೂತನ ವಾಣಿಜ್ಯ ಮಳಿಗೆಗಳಲ್ಲಿ ಅಕಾಡೆಮಿಗೆ ಸ್ಥಳಾವಕಾಶ ದೊರೆಯಬಹುದು.

ದೃಶ್ಯ-ಶ್ರಾವ್ಯ ಮಾಧ್ಯಮದಲ್ಲಿ ಕೊಂಕಣಿ ಕಾರ್ಯಕ್ರಮ: ಕೊಂಕಣಿಯನ್ನು ಟಿವಿ ಮತ್ತು ರೇಡಿಯೊ ಮಾಧ್ಯಮದ ಮುಖಾಂತರ ಜನಸಾಮಾನ್ಯರ ಬಳಿ ಕೊಂಡೊಯುವ ವ್ಯವಸ್ಥೆ ಮಾಡುವುದು. ಕೊಂಕಣಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಚರ್ಚಾಗೋಷ್ಟಿ, ವಿಚಾರ ಗೋಷ್ಟಿ, ಹಾಡು, ಸಂಸ್ಕೃತಿ ಬಗ್ಗೆ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ತಯಾರು ಮಾಡಿ ಪ್ರಸಾರ ಮಾಡುವುದು ಹಾಗೂ  ಎಫ್ ಎಮ್ ಮತ್ತು ಆಕಾಶವಾಣಿಗಳಲ್ಲಿ ಕೊಂಕಣಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು. ಮಕ್ಕಳಿಗೆ ಭಾಷೆಯ ಮೇಲೆ ಅಭಿಮಾನ ಬೆಳೆಯಲು ಮಕ್ಕಳಿಗಾಗಿ ಕೊಂಕಣಿ ಹಾಡುಗಳು, ಕೊಂಕಣಿ ಕಾಟೂರ್ನ್ ಮತ್ತು ಕಲಿಕೆಗೆ ಅಗತ್ಯವಿರುವ ದೃಶ್ಯ-ಶ್ರಾವ್ಯ ಸುರುಳಿಗಳನ್ನು (ಸಿಡಿ) ತಯಾರಿಸಿ ಮಕ್ಕಳಿಗೆ ತಲುಪಿಸುವ ವ್ಯವಸ್ಥೆ ಮಾಡುವುದು.

ಬಹುಭಾಷ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮಗಳು: ಕರಾವಳಿ ಕರ್ನಾಟಕದಲ್ಲಿ ಕೊಂಕಣಿ, ತುಳು, ಕೊಡವ, ಬ್ಯಾರಿ ಮತ್ತು ಅರೆಭಾಷೆ ಸಂಸ್ಕೃತಿಯ ಜನರು ಕನ್ನಡ ಸಂಸ್ಕೃತಿಯೊಡನೆ ಮಿಳಿತವಾಗಿ ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ. ಈ ಸ್ಥಳೀಯ ಭಾಷಾ ಅಕಾಡೆಮಿಗಳು ಸೇರಿ ತಮ್ಮ ತಮ್ಮ  ಸಂಸ್ಕೃತಿಗಳ ಪರಿಚಯವನ್ನು ಇತರರಿಗೆ ಮಾಡಿಕೊಡುವಂತಹ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮಗಳನ್ನು ನಾಡಿನ ವಿವಿಧ ಸ್ಥಳಗಳಲ್ಲಿ ಆಯೋಜಿಸುವುದು.

ಸಂಶೋಧನೆ ಮತ್ತು ದಾಖಲೀಕರಣ:  * ಭಾಷೆ- ಸಾಹಿತ್ಯ * ಕೊಂಕಣಿ ಅಧ್ಯಯನಾತ್ಮಕ ಗ್ರಂಥ ಪ್ರಕಟಣೆ * ಕಲೆ ಮತ್ತು ಜಾನಪದ * ಕೊಂಕಣಿ ಕಲಾವಿದರ ಗಣತಿ ಇತ್ಯಾದಿ ಕೊಂಕಣಿಯ ಹಲವಾರು ಸಾಹಿತ್ಯಿಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ದಾಖಲೀಕರಣದ ತುರ್ತು ಅಗತ್ಯವಿದೆ. ಸಾಹಿತ್ಯದ ವಿವಿಧ ಪ್ರಕಾರಗಳನ್ನು ಅಧ್ಯಯನ ಮಾಡಿ, ಸಾಹಿತ್ಯ ಚರಿತ್ರೆಯನ್ನು ಅಧಿಕೃತವಾಗಿ ದಾಖಲುಗೊಳಿಸುವ ಅಗತ್ಯವಿದೆ. ಕೊಂಕಣಿಯ ಭಾಷಾ ಪ್ರಬೇಧಗಳು, ಅವುಗಳಲ್ಲಿರುವ ಸಾಹಿತ್ಯ, ಪತ್ರಿಕೋದ್ಯಮ ಇತರ ವಿಷಯಗಳ ಬಗ್ಗೆ ಕ್ಷೇತ್ರಕಾರ್ಯ ನಡೆಸಬಹುದು.

ಕಲಾವಿದರ ಗಣತಿ: ಕೊಂಕಣಿಯಲ್ಲಿ ವಿವಿಧ ಪ್ರಕಾರಗಳ ಮತ್ತು ಕ್ಷೇತ್ರಗಳ ಹಲವಾರು ಕಲಾವಿದರಿದ್ದರೂ. ಅಕಾಡೆಮಿಯ ಉಪಯೋಗವನ್ನು ಕೆಲವು ಕಲಾವಿದರು ಮಾತ್ರ ಪಡೆಯುತ್ತಿದ್ದಾರೆ. ಆದುದರಿಂದ ಈ ಬಗ್ಗೆ  ರಾಜ್ಯ ಮಟ್ಟದ ಕೊಂಕಣಿ ಕಲಾವಿದರ ಒಂದು ಗಣತಿ ಮಾಡಿ ಅವರನ್ನು ಅಕಾಡೆಮಿಯೊಂದಿಗೆ ಸ್ಪಂದಿಸುವ ಅವಕಾಶವನ್ನು ಎಲ್ಲಾ ಕಲಾವಿದರಿಗೆ ಒದಗಿಸಿ ಕೊಡವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.

ಇತರೆ: ಇದಲ್ಲದೇ ವಾರ್ಷಿಕವಾಗಿ ಶಿಕ್ಷಣ ಕಾರ್ಯಾಗಾರಗಳು, ಶಾಲಾ ಗ್ರಂಥಾಲಯಕ್ಕೆ ಕೊಂಕಣಿ ಸಾಹಿತ್ಯ ಪುಸ್ತಕಗಳನ್ನು ಉಚಿತ ಒದಗಿಸುವುದು, ಕೊಂಕಣಿ ಕಲಿಕಾ ಮಕ್ಕಳಿಗೆ ಸ್ಕಾಲರ್ ಶಿಫ್ ಯೋಜನೆ, ಪ್ರತಿಭಾಸ್ಪರ್ಧೆಗಳು, ಮಕ್ಕಳಿಗೆ ರಜಾ ಶಿಬಿರಗಳು, ಕೊಂಕಣಿ ಸಾಹಿತ್ಯ ಶಿಬಿರ ಮತ್ತು ಸಮ್ಮೇಳನಗಳು, ಕೊಂಕಣಿ ಸಂಗೀತೋತ್ಸವಗಳು, ಕೊಂಕಣಿ ಮಾನ್ಯತಾ ದಿನಾಚರಣೆ ಕಾರ್ಯಕ್ರಮ, ಯುವಮಹೋತ್ಸವಗಳು, ಗಡಿನಾಡು ಹೊರನಾಡು ಹೊರರಾಜ್ಯಗಳಲ್ಲಿ ಕೊಂಕಣಿ ಕಾರ್ಯಕ್ರಮಗಳು, ಕೊಂಕಣಿ ಪುಸ್ತಕ ಮತ್ತು ಸಿ.ಡಿ. ಖರೀದಿಗಳು, ಅಕಾಡೆಮಿ ಪ್ರಕಟಣೆಗಳು (ಕೊಂಕಣಿಯ ವಿವಿಧ ಲಿಪಿಗಳಿಗೆ ಆದ್ಯತೆ), ಅಕಾಡೆಮಿ ತ್ರೈಮಾಸಿಕ ವಾರ್ತಾ ಸಂಚಿಕೆ ಪ್ರಕಟಣೆ, ಪ್ರಾಯೋಜಿತ ಕಾರ್ಯಕ್ರಮಗಳು, ಕೊಂಕಣಿ ಸಾಂಸ್ಕೃತಿಕ ಸಮ್ಮೇಳನಗಳು, ಸಾಹಿತ್ಯ-ಕಾವ್ಯ ಪುಸ್ತಕ ಪ್ರಕಟಣೆ ಶಬ್ದಕೋಶ, ಅನ್ಯಭಾಷಿಕರಿಗೆ ಕೊಂಕಣಿ ಸುಲಭ ಕಲಿಕಾ ಸಾಹಿತ್ಯ ರಚನೆ, ವಿಶೇಷ ಘಟಕಾ ಯೋಜನಾ ಕಾರ್ಯಕ್ರಮ ಮತ್ತಿತರ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ.

ಇದು ಈ 2014-17 ಅವಧಿಯ ಕೊಂಕಣಿ ಅಕಾಡೆಮಿ ಮಾಡಬಹುದಾದ ಕಾರ್ಯಗಳು. ಕೊಂಕಣಿ ಜನರು ಮತ್ತು ಸರಕಾರದ ಮಟ್ಟದಲ್ಲಿ ಅಕಾಡೆಮಿ ಸೇತುವೆಯಂತೆ ಕೆಲಸ ಮಾಡಿ ಸರಕಾರ ಯಾವ ಉದ್ದೇಶದಿಂದ ಕೊಂಕಣಿ ಅಕಾಡೆಮಿಯನ್ನು ಸ್ಥಾಪಿಸಿದೆಯೊ ಆ ಉದ್ದೇಶವನ್ನು ಪೂರ್ಣಗೊಳಿಸುವ ಕೆಲಸವನ್ನು ಅಕಾಡೆಮಿ ವತಿಯಿಂದ ಮುಂದಿನ ಮೂರು ವರ್ಷಗಳಲ್ಲಿ ಮಾಡಲಾಗುವುದು. ಆದರೆ ಈ ಎಲ್ಕಾ ಕಾರ್ಯಗಳಿಗೆ ಕೊಂಕಣಿಯ ಎಲ್ಲಾ ಭಾಷಾ ಸಮುದಾಯಗಳ ಸಹಕಾರ ಬೇಕು.

ಮಾಧ್ಯಮ ಮಿತ್ರರು ಸದಾ ನಮ್ಮ ಬೆಂಬಲಕ್ಕೆ ನಿಂತು ನಮ್ಮ ಕೆಲಸ ಕಾರ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದೀರಿ. ನಮ್ಮ ಅವಧಿಯಲ್ಲೂ ತಮ್ಮೆಲ್ಲರ ಸಹಕಾರ ಬೇಕು. ಅದನ್ನು ಆಶಿಸುತ್ತಾ ತಮಗೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.

 

ಇತೀ ತಮ್ಮ ವಿಶ್ವಾಸಿ

ರೊಯ್ ಕ್ಯಾಸ್ತೆಲಿನೊ

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]