(2015 ಜನವರಿ 18 ರಂದು ಬೆಂಗಳೂರಿನ ಸಂಸ ಬಯಲು ರಂಗ ಮಂದಿರದಲ್ಲಿ ನಡೆದ ಕೊಂಕಣಿ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರು ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊರವರು ಪ್ರಸ್ತಾವಿಕ ಮಾತುಗಳನ್ನಾಡಿದರು. ತಮ್ಮ ಈ ಮಾತುಗಳಲ್ಲಿ ಕೊಂಕಣಿ ಪೀಠದ ಮನವಿಯನ್ನು ಮುಖ್ಯಮಂತ್ರಿಗಳ ಎದುರು ಸಲ್ಲಿಸಿದರು. ಕೊಂಕಣಿ ಅಕಾಡೆಮಿಯ ಕಾರ್ಯಕ್ರಮಗಳ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಮುಖ್ಯಮಂತ್ರಿಯವರು ಆ ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಂದಿನ ಆರ್ಥಿಕ ವರ್ಷದಿಂದ ಕೊಂಕಣಿ ಅಧ್ಯಯನ ಪೀಠವನ್ನು ನೀಡುವ ಘೋಷಣೆ ಮಾಡಿದರು.)

 


ವೇದಿಕೆಯಲ್ಲಿರುವ ನಾಡಿನ ಹೆಮ್ಮೆಯ ಮುಖ್ಯಮಂತ್ರಿಯವರಾದ ಸನ್ಮಾನ್ಯ ಸಿದ್ದರಾಮಯ್ಯರವರೇ,
ಗೌರವ ಅತಿಥಿಗಳಾಗಿ ಉಪಸ್ಥಿತರಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀಮತಿ ಉಮಾಶ್ರೀಯವರೇ,
ಮಂಗಳೂರಿನ ನೆಚ್ಚಿನ ಶಾಸಕರಾದ ಶ್ರೀ ಜೆ ಆರ್ ಲೋಬೊ ರವರೇ,
ಹಾಗೂ ಕೊಂಕಣಿಯ ಮುಂದಾಳು ಡಾ ಪಿ ದಯಾನಂದ ಪೈ ಇವರೆಲ್ಲರಿಗೂ ವಂದಿಸುತ್ತಾ
ಈ ಕಾರ್ಯವನ್ನು ಸಂಪನ್ನಗೊಳಿಸಲು ಆಗಮಿಸಿದಂತಹಾ ಎಲ್ಲಾ ಕೊಂಕಣಿ ಬಾಂದವರಿಗೆ ನಮಸ್ಕರಿಸುತ್ತಾ ಪ್ರಸ್ತಾವಿಕವಾಗಿ ಒಂದೆರಡು ನುಡಿಗಳನ್ನು ಆಡಲು ಇಚ್ಛಿಸುತ್ತೇನೆ.

ಇಂದು ನಾಡಿನ ರಾಜಧಾನಿಯ ಈ ಸಂಸ ಬಯಲು ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯ ನಡೆಯುತ್ತಿದೆ. ಜನರಲ್ಲಿ ಕೊಂಕಣಿ ಎಂದರೆ ಕರಾವಳಿ ಕರ್ನಾಟಕದ ಒಂದು ಭಾಷೆ ಎಂಬ ಅಭಿಪ್ರಾಯವಿದೆ. ಅದು ತಪ್ಪು. ಕೊಂಕಣಿಗರು ನಾಡಿನಾದ್ಯಂತ ಪಸರಿಸಿದ್ದಾರೆ. ಜನರಿರುವೆಡೆ ಅಕಾಡೆಮಿ ತಲುಪಬೇಕು ಎಂಬ ಆಶಯದಿಂದ ಇಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಳೆದ ವರ್ಷ ನಾವು ಧಾರವಾಡದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೆವು.

ಸಾಹಿತಿಗಳು, ಕಲಾವಿದರು ಒಂದು ಭಾಷೆಯ, ಸಂಸ್ಕೃತಿಯ ರಾಯಭಾರಿಗಳು. ಅವರನ್ನು ಗೌರವಿಸುವುದರಿಂದ ಭಾಷೆಯ ಬೆಳವಣಿಗೆಗೆ ಪೂರಕ ಸಹಾಯ ದೊರೆಯುತ್ತದೆ. ನಮ್ಮನ್ನು ನಾವೇ ಗೌರವಿಸಿದಂತಾಗುತ್ತದೆ. ಇಂದಿಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವ ಎಲ್ಲರನ್ನೂ ಅಭಿನಂದಿಸುತ್ತೇನೆ.

ಸುಮಾರು 500 ವರ್ಷಗಳಿಂದ ಕೊಂಕಣಿಗರು ಕನ್ನಡ ನೆಲದಲ್ಲಿ ಕನ್ನಡ ಮನಸುಗಳೊಡನೆ ಒಂದಾಗಿ ಬಾಳುತ್ತಿದ್ದಾರೆ. ಕನ್ನಡದ, ಕನ್ನಡ ನಾಡಿನ ಬೆಳವಣಿಗೆಗೆ ಕೊಂಕಣಿಗರ ಕೊಡುಗೆ ಅನನ್ಯವಾದುದು. ಸಾಹಿತ್ಯ, ಸಂಸ್ಕೃತಿ, ಕೃಷಿ, ರಾಜಕೀಯ, ಬ್ಯಾಂಕಿಂಗ್, ಆರೋಗ್ಯ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಕೊಂಕಣಿಗರು ತಮ್ಮ ನಾಡಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ವಿವಿಧತೆಯಲ್ಲಿ ಏಕತೆಯ ತತ್ವ ಕೊಂಕಣಿಯ ಮೂಲಬೇರು. ಕರ್ನಾಟಕದಲ್ಲಿ ಸುಮಾರು ೪೧ ಸಮುದಾಯಗಳು ಕೊಂಕಣಿಯನ್ನು ಮಾತನಾಡುತ್ತಾರೆ. ಅವರಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ ಸಮಾಜದ ಜನರಿದ್ದಾರೆ.
ನೂರಾರು ವರ್ಷಗಳ ತನಕ ಕೊಂಕಣಿಗೆ ಯಾವುದೇ ರಾಜಾಶ್ರಯವಿಲ್ಲದಿದ್ದರೂ ಕೊಂಕಣಿ ತನ್ನ ಸ್ವಂತ ಬಲದ ಮೇಲೆ ಬೆಳೆದು ಬಂದಿತ್ತು. 1992ರಲ್ಲಿ ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಕೊಂಕಣಿಗೆ ಮಾನ್ಯತೆ ನೀಡಲಾಯಿತು.
1994ರಲ್ಲಿ ಕರ್ನಾಟಕ ಸರಕಾರವು ಕೊಂಕಣಿಗೆ ಅಕಾಡೆಮಿಯನ್ನು ನೀಡಿತು. ಕಳೆದ 20 ವರ್ಷಗಳಲ್ಲಿ ಕರ್ನಾಟಕ ಸರಕಾರವು ಕೊಂಕಣಿಯ ಬೆಳವಣಿಗೆಗೆ ನೀಡಿದ ಸಹಕಾರ ಅಪೂರ್ವವಾದುದು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸರಕಾರ ಮತ್ತು ಕೊಂಕಣಿ ಜನರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ. ರಾಜ್ಯಾದ್ಯಾಂತ ಪಸರಿಸಿರುವ ಕೊಂಕಣಿ ಕಲಾವಿದರು, ಸಾಹಿತಿಗಳನ್ನು ಗುರುತಿಸುವ, ಗೌರವಿಸುವ ಕೆಲಸವನ್ನು ಅಕಾಡೆಮಿ ಮಾಡುತ್ತಾ ಬಂದಿದೆ. ಇಂದಿನ ಈ ಕಾರ್ಯಕ್ರಮ ಅದಕ್ಕೊಂದು ಸಾಕ್ಷಿ.

ಪ್ರಸ್ತುತ ಮುಖ್ಯಮಂತ್ರಿಯವರಾದ ಸನ್ಮಾನ್ಯ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ಕೊಡುವವರು. ಬಡವರಲ್ಲಿ ಬಡವರ, ಸಮಾಜದ ಕಟ್ಟ ಕಡೆಯ ಜನರ ಹಸಿವೆ ತಣಿಸಿದರೆ ಮಾತ್ರ ಸಾಮಾಜಿಕ ನ್ಯಾಯ ಪಾಲಿಸಿದಂತಾಗುತ್ತದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ದೊರೆಯುತ್ತದೆ, ನಾಡು ಬೆಳೆಯುತ್ತದೆ. ಈ ಚಿಂತನೆಯಿಂದ ಅವರು ಅನ್ನಭಾಗ್ಯ, ಕ್ಷೀರಭಾಗ್ಯ ಇತ್ಯಾದಿ ಜನಪರ ಕಾರ್ಯಕ್ರಮಗಳ ಮುಖಾಂತರ ಸದೃಢ ನಾಡನ್ನು ಕಟ್ಟುವ ಕೈಂಕರ್ಯ ಮಾಡುತ್ತಿದ್ದಾರೆ.

ಹಸಿವು ಮುಕ್ತ ನಾಡು ಬೇಕು. ಅದರೊಟ್ಟಿಗೆ ಕಲೆ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆ ಕೂಡಾ ಒಂದು ರಾಜ್ಯವನ್ನು ಶ್ರೇಷ್ಟತೆಯೆಡೆಗೆ ಕೊಂಡೊಯ್ಯಬಲ್ಲುದು. ಇದಕ್ಕಾಗಿ ಕೂಡಾ ಸರಕಾರ ಶ್ರಮಿಸುತ್ತಿದೆ. ನಾಡಿನ ಭಾಷೆಯಾದ ಕನ್ನಡದೊಡನೆ, ಸೋದರ ಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ, ಕೊಡವ ಭಾಷೆಗಳ ಬೆಳವಣಿಗೆಗೂ ಸರಕಾರ ಮುಕ್ತ ಅವಕಾಶ ನೀಡಿದೆ. ಸಮಾನ ಅವಕಾಶ, ಸಮಾನ ಅನುದಾನ ನೀಡಿದೆ. ಸ್ವಾಯತ್ತೆ ಕೂಡಾ ನೀಡಿದೆ.

ಈ ಅವಕಾಶವನ್ನು ಪಡೆದ ಕೊಂಕಣಿ ಅಕಾಡೆಮಿ ಕೂಡಾ ಕೊಂಕಣಿಯ ಸಮಗ್ರ ಬೆಳವಣಿಗೆಗೆ ನಿರಂತರ ಶ್ರಮಿಸುತ್ತಿದೆ. ಯಾವುದೇ ಭಾಷೆ ಬೆಳೆಯಬೇಕಾದರೆ, ಇಂದಿನ ಜಾಗತೀಕರಣದ ಭರಾಟೆ ಎದುರಿಸಬೇಕಾದರೆ ಶಿಕ್ಷಣದ ಮುಖಾಂತರ ಆ ಭಾಷೆಯನ್ನು ವಿದ್ಯಾರ್ಥಿಗಳು ಕಲಿತರೆ ಮಾತ್ರ ಸಾಧ್ಯ. ಕೊಂಕಣಿಗೆ ಈ ಅವಕಾಶವನ್ನು ಸರಕಾರ 8 ವರ್ಷಗಳ ಹಿಂದೆ ನೀಡಿದೆ. ಪ್ರಸ್ತುತ 4 ವರ್ಷದಿಂದ ವಿದ್ಯಾರ್ಥಿಗಳು ಅಧಿಕೃತವಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಕೊಂಕಣಿಯನ್ನು ತೃತೀಯ ಭಾಷೆಯಾಗಿ ಬರೆಯುತ್ತಿದ್ದಾರೆ. ಕಳೆದ ಸಾಲಿನಿಂದ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ಮೂರು ಕಾಲೇಜುಗಳಲ್ಲಿ ಕೊಂಕಣಿಯನ್ನು ಪದವಿಯಲ್ಲಿ ಕಲಿಸಲಾಗುತ್ತಿದೆ.

ಕೊಂಕಣಿ ಅಕಾಡೆಮಿಯು ಈ ಸಾಲಿನಲ್ಲಿ ತಿಂಗಳಿಗೆ ಎರಡು ಪುಸ್ತಕಗಳಂತೆ ಇದುವರೆಗೆ 9 ತಿಂಗಳಲ್ಲಿ 19 ಪುಸ್ತಕಗಳನ್ನು ಪ್ರಕಟಿಸಿದೆ. ಈ ಪುಸ್ತಕಗಳು, ಇತರ ಪುಸ್ತಕಗಳು, ಸಿಡಿಗಳು ಇವನ್ನು ಮಾರಾಟ ಮಾಡಲು `ಮೊಬೈಲ್ ಕೊಂಕಣಿ ಬಜಾರ್ ವಾಹನದ ವ್ಯವಸ್ಥೆಯಿದೆ.

ಇದಲ್ಲದೆ ಸಾಹಿತ್ಯ ಸಮ್ಮೇಳನ, ಸಾಂಸ್ಕೃತಿಕ ಸಮ್ಮೇಳನ, ಜಾನಪದ ತರಬೇತಿ, ನಾಟಕ ತರಬೇತಿ, ಕೊಂಕಣಿ ಜಾಗೃತಿ ಅಭಿಯಾನ  ಇತ್ಯಾದಿ ಕೊಂಕಣಿ ಭಾಷೆ-ಕೊಂಕಣಿ ಶಿಕ್ಷಣ-ಕೊಂಕಣಿ ಸಂಸ್ಕೃತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು, ಒಂದು ಭಾಷಾ ಅಕಾಡೆಮಿ ಮಾಡಬಹುದಾದ ಎಲ್ಲಾ ಕೆಲಸಗಳನ್ನು ರಾಜ್ಯಾದ್ಯಾಂತ ಸದಸ್ಯರ ನೆರವಿನಿಂದ ಆಯೋಜಿಸಲಾಗುತ್ತಿದೆ.

ಸನ್ಮಾನ್ಯ ಮುಖ್ಯಮಂತ್ರಿಯವರೇ,
ನೀವು ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎಂಬ ತೃಪ್ತಿಯಿದೆ. ಕೊಂಕಣಿಗೆ ಒಂದು ಅಧ್ಯಯನ ಪೀಠ ಬೇಕೆನ್ನುವ ಕೊಂಕಣಿಗರ ಬಹುಕಾಲದ ಕನಸನ್ನು ತಾವು ನನಸಾಗಿಸಲು ಸಹಕಾರ ನೀಡಬೇಕಾಗಿ ಈ ವೇದಿಕೆಯಿಂದ ಕೇಳಿಕೊಳ್ಳುತ್ತಾ ಇದ್ದೇನೆ. ಅಧ್ಯಯನ ಪೀಠದ ಮುಖಾಂತರ ಮಾತ್ರ ಶಾಲೆಯಲ್ಲಿ ಕೊಂಕಣಿ ಕಲಿಕೆಗೆ ಒಂದು ತಾರ್ಕಿಕ ಅಂತ್ಯ ದೊರೆತಂತಾಗುತ್ತದೆ. ಕೊಂಕಣಿಗೆ ಉನ್ನತ ಶಿಕ್ಷಣದ ಹಲವಾರು ಸೌಲಭ್ಯಗಳು ದೊರೆಯುತ್ತವೆ. ಕೊಂಕಣಿಯ ಇತಿಹಾಸದ ದಾಖಲೀಕರಣ ಸುಲಭವಾಗುತ್ತದೆ. ಸಂಶೋಧನೆಗೆ ಹೆಚ್ಚಿನ ಒತ್ತು ದೊರೆಯುತ್ತದೆ. ಅಕಾಡೆಮಿಕ್ ವಲಯದಲ್ಲಿ ಕೊಂಕಣಿ ಗುರುತಿಸಲ್ಪಡುತ್ತದೆ. ಅಲ್ಪಸಂಖ್ಯಾತ ಭಾಷೆಯಾದ ಕೊಂಕಣಿ ಬೆಳೆಯುತ್ತದೆ.

ಕೊಂಕಣಿ ಅಧ್ಯಯನ ಪೀಠ ಕೊಂಕಣಿಗರ ಕನಸು. ಇದನ್ನು ನನಸಾಗಿಸಲು, ಪೂರ್ಣ ಪ್ರಮಾಣದ ಪೀಠ ಆರಂಭಿಸಲು ಎರಡು ಕೋಟಿ ರೂಪಾಯಿಯ ಅಗತ್ಯವಿದೆ. ಆದುದರಿಂದ ಮುಂದಿನ ಸಾಲಿನ ಮುಂಗಡಪತ್ರದಲ್ಲಿ ಕೊಂಕಣಿ ಅಧ್ಯಯನ ಪೀಠ ಆರಂಭಿಸಲು ಅನುದಾನ ನೀಡಿ ಈ ಕೆಲಸ ಸುಸೂತ್ರವಾಗಿ ನಡೆಯುವಂತೆ ತಾವು ಅನುವು ಮಾಡಬೇಕಾಗಿ ವಿನಮ್ರ ಕೋರಿಕೆ.

ಮಗದೊಮ್ಮೆ ಕೊಂಕಣಿ ಭಾಷೆ ಬೆಳೆಸಲು ಸಹಕರಿಸುವ ಸನ್ಮಾನ್ಯ ಮುಖ್ಯಮಂತ್ರಿಯವರನ್ನು ಎಲ್ಲಾ ಕೊಂಕಣಿ ಜನರ ಪರವಾಗಿ ಅಭಿನಂದಿಸುತ್ತಾ, ಭಾಷೆ ಬೆಳೆಸುವ ಈ ಕೆಲಸವನ್ನು ಮಂದುವರಿಸುತ್ತೇವೆ ಎಂದು ಹೇಳುತ್ತಾ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ.

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]