Print

ಸಂಗಮ ಸಂಭ್ರಮ -2015

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಕೊಂಕಣಿ, ತುಳು, ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಸಂಯೋಜಕತ್ವ, ದ.ಕ. ಜಿಲ್ಲಾಡಳಿತ ಸಹಕಾರ

ಹಾಗೂ ರಾಜ್ಯದ ಎಲ್ಲಾ ಅಕಾಡೆಮಿಗಳು ಮತ್ತು ಕನಕದಾಸ ಅಧ್ಯಯನ ಕೇಂದ್ರ

ಇವುಗಳ ಜಂಟಿ ಸಂಯೋಜಕತ್ವದಲ್ಲಿ ರಾಜ್ಯಮಟ್ಟದ ಸಾಹಿತ್ಯ ಸಾಂಸ್ಕೃತಿಕ ವೈಭವ

ಪತ್ರಿಕಾಗೋಷ್ಠಿ: ದಿನಾಂಕ: 15/07/2015 ಮಧ್ಯಾಹ್ನ 12.30

ಸ್ಥಳ: ಹೋಟೆಲ್ ವುಡ್‌ಲ್ಯಾಂಡ್, ಮಂಗಳೂರು

ಕನ್ನಡ ನಾಡಿನ ವೈವಿಧ್ಯಮಯ ಕಲೆ, ಭಾಷೆ ಸಾಹಿತ್ಯ, ಸಂಸ್ಕೃತಿಗಳ ನಡುವೆ ಸಾಮರಸ್ಯ ನಿರ್ಮಿಸಿ, ಅವುಗಳನ್ನು ಉಳಿಸಿ, ಬೆಳೆಸಿ ಪೋಷಿಸುವುದು ನಮ್ಮೆಲ್ಲರ ಕರ್ತವ್ಯ. ಕರ್ನಾಟಕ ಸರ್ಕಾರವು ಈ ದಿಶೆಯಲ್ಲಿ ರಾಷ್ಟ್ರ ಮಟ್ಟದಲ್ಲಿಯೇ ಅತೀ ಹೆಚ್ಚು ಸಂಖ್ಯೆಯ ಭಾ?, ಸಾಹಿತ್ಯ, ಸಾಂಸ್ಕೃತಿಕ ಮತ್ತು ಕಲಾಕ್ಷೇತ್ರದ ಅಕಾಡೆಮಿಗಳನ್ನು ಸ್ಥಾಪಿಸಿ ನಿರಂತರ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. 2014 ರಲ್ಲಿ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಎಲ್ಲಾ ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರಗಳು ಹಾಗೂ ಕನಕದಾಸ ಅಧ್ಯಯನ ಕೇಂದ್ರ ಸೇರಿ ವಸಂತ ಸಂಭ್ರಮ ಎಂಬ ಉತ್ಸವವನ್ನು ನಡೆಸಿದ್ದು, ಈ ಬಾರಿ ಈ ಎಲ್ಲಾ ಸಂಸ್ಥೆಗಳು ಸೇರಿ ಅದೇ ಮಾದರಿಯ ಉತ್ಸವವು ಕಡಲತಡಿಯ ಪ್ರಸಿದ್ದ ನಗರಿ ಮಂಗಳೂರು ಸಮೀಪದ ವಾಮಂಜೂರಿನ ಪಿಲಿಕುಳದಲ್ಲಿ ಸಂಗಮ ಸಂಭ್ರಮ ವೆಂಬ ಅರ್ಥಪೂರ್ಣ ಹೆಸರಿನೊಂದಿಗೆ ಕನ್ನಡ ನಾಡಿನ ಕಲಾ ಸಂಪತ್ತನ್ನು ಬಿತ್ತರಿಸಲಿದೆ. 

'ಸಂಗಮ ಸಂಭ್ರಮ'ದ ಎಲ್ಲಾ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು ವರ್ತಮಾನದ ತಲ್ಲಣಗಳು-ಸಾಂಸ್ಕೃತಿಕ ಪ್ರತಿಕ್ರಿಯೆ ಎಂಬ ಒಂದು ವಿಶೇಷ ವಿಷಯ(theme)ವನ್ನು ಕೇಂದ್ರೀಕರಿಸಿ ಸಂಯೋಜಿಸಲಾಗಿದೆ. ಕರ್ನಾಟಕದ ಬಹು ಭಾಷಿಯ ವೈವಿಧ್ಯತೆಯನ್ನು-ಕನ್ನಡ, ತುಳು, ಕೊಂಕಣಿ, ಬ್ಯಾರಿ, ಕೊಡವ, ಉರ್ದು, ಅರೆಭಾಷೆ- ಇಷ್ಟೂ ಭಾಷೆಗಳ ಸಂಗಮದೊಂದಿಗೆ ಆಚರಿಸಲಾಗುವುದು. ದೂರದ ಗುಲ್ಬರ್ಗದಿಂದ ಮೈಸೂರು ತನಕ, ಶಿವಮೊಗ್ಗದಿಂದ ಕೋಲಾರ ಬೆಂಗಳೂರಿನಿಂದ ಮಂಗಳೂರುವರೆಗಿನ ಉದ್ದಗಲದಲ್ಲಿ ಹರಡಿರುವ ಭಾಷೆ, ಸಾಹಿತ್ಯ, ಜನಪದ ನಾಟಕ, ಸಂಗೀತ, ಶಿಲ್ಪಕಲೆ, ಯಕ್ಷಗಾನ-ಬಯಲಾಟದಂತಹ ಪ್ರಾದೇಶಿಕ ವೈವಿದ್ಯದ ಜನಪದ ಕಲಾವಿದರ ಪ್ರದರ್ಶನವನ್ನು ಒಂದೇ ಕಡೆ ನೋಡಿ, ಅನಂದಿಸುವ ಕನ್ನಡ ನಾಡಿನ ಭವ್ಯ ಸಂಸ್ಕೃತಿಯನ್ನು ಸಾಕ್ಷಾತ್ಕರಿಸುವುದೇ ಸಂಗಮ ಸಂಭ್ರಮದ ಮೂಲ ಉದ್ದೇಶ. 

ದಿನದಿಂದ ದಿನಕ್ಕೆ ಪ್ರಸಿದ್ದಿ ಹೊಂದುತ್ತಿರುವ ಕರಾವಳಿಯ ಏಕೈಕ ನಿಸರ್ಗರಮಣೀಯ ತಾಣ- ಡಾ.ಶಿವರಾಮಕಾರಂತ ಪಿಲಿಕುಳ ನಿಸರ್ಗಧಾಮವಾಗಿದೆ. ಇಂತಹ ಸುಂದರ ಪರಿಸರದಲ್ಲಿ ರಾಜ್ಯ ಮಟ್ಟದ ಈ ಭವ್ಯ ಸಂಗಮ ಸಂಭಮ ಉತ್ಸವವನ್ನು ನಡೆಸುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡದ ಮೂರು ಭಾಷಾ ಅಕಾಡೆಮಿಗಳು ಹಾಗೂ ದ.ಕ.ಜಿಲ್ಲಾಡಳಿತಕ್ಕೆ ಹೆಮ್ಮೆಯ ವಿಷಯವಾಗಿದೆ.

ಉದ್ಘಾಟನಾ ದಿನವಾದ 25-7-2015 ಶನಿವಾರ ಪೂರ್ವಾಹ್ನ 9.00 ಗಂಟೆಯಿಂದ ಆರಂಭಿಸಿ ವಾಮಂಜೂರು ಪೇಟೆ ಮೂಲಕ ಆಹ್ವಾನಿತ ಮಾನ್ಯ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಮುಂದಾಳುತ್ವದಲ್ಲಿ ಕರ್ನಾಟಕದ ಮೂಲೆ ಮೂಲೆಯಿಂದ ಬಂದಿರುವ ಕಲಾತಂಡಗಳು, ಹದಿಮೂರು ಅಕಾಡೆಮಿಯ ಅಧ್ಯಕ್ಷರುಗಳು, ಸದಸ್ಯರುಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ, ರಾಷ್ಟ್ರೀಯ ಕನಕದಾಸ ಅಧ್ಯಯನ ಕೇಂದ್ರಗಳ ಅಧ್ಯಕ್ಷರು, ಸದಸ್ಯರು, ಭಾಷಾ ತಜ್ಞರು, ಕಲಾವಿದರು, ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು, ಕವಿಗಳು, ರಾಜ್ಯಮಟ್ಟದ ಅಧಿಕಾರಿಗಳು, ಭಾಗವಹಿಸುವ ಭವ್ಯ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆಯು ಪಿಲಿಕುಳ ನಿಸರ್ಗಧಾಮವನ್ನು ತಲುಪಿ ಪೂರ್ವಾಹ್ನ 10.30ಕ್ಕೆ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಈ ದಿನದ ಉಳಿದ ಅವಧಿಯಲ್ಲಿ ಕರ್ನಾಟಕದ ಎಲ್ಲಾ ಅಕಾಡೆಮಿಗಳ ಪರವಾಗಿ ರಾಜ್ಯದ ವಿವಿಧ ಮೂಲೆಗಳಿಂದ ಬರುವ 65 ಅಹ್ವಾನಿತ ವಿದ್ವಾಂಸರುಗಳು ಎಲ್ಲ ಅಕಾಡೆಮಿಗಳ ಅಧ್ಯಕ್ಷರೊಡನೆ ಅರ್ಥಪೂರ್ಣ ಸಂವಾದ ನಡೆಸಲಿದ್ದಾರೆ. ವಿಶೇಷವಾಗಿ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಶ್ರೀಮತಿ ಉಮಾಶ್ರೀ ಯವರೊಂದಿಗೆ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ನಿರ್ದೇಶಕರ ಉಪಸ್ಥಿತಿಯಲ್ಲಿ, ಸಂಸ್ಕೃತಿ ಮತ್ತು ಕಲಾ ಕ್ಷೇತ್ರದ ಅಭಿವೃದ್ಧಿ ವಿಚಾರಗಳಲ್ಲಿ ಮಾತುಕತೆ ಇರುತ್ತದೆ. ಆನಂತರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಶಾಸ್ತ್ರೀಯ ಗಾಯನ, ನೃತ್ಯ ರೂಪಕ; ಕರ್ನಾಟಕ ಜಾನಪದ ಅಕಾಡೆಮಿಯಿಂದ ಡೊಳ್ಳಿನ ಪದ, ಮೊಹರಂ ಪದ ತತ್ವಪದ, ಕರ್ನಾಟಕ ನಾಟಕ ಅಕಾಡೆಮಿಯಿಂದ ನಾಟಕ ಪ್ರದರ್ಶನಗಳು ನಡೆಯಲಿವೆ. 

ಮರುದಿನ 26-07-2015 ಭಾನುವಾರ ಪುರ್ವಾಹ್ನ 9.30 ರಿಂದ ಪ್ರಾರಂಭಗೊಂಡು ಉರ್ದು ಅಕಾಡೆಮಿಯಿಂದ ಗಜಲ್ ಕಾರ್ಯಕ್ರಮ, ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಕಥಾರಂಗ, ಯಕ್ಷಗಾನ ಅಕಾಡೆಮಿಯಿಂದ ತೊಗಲು ಗೊಂಬೆಯಾಟ ಮತ್ತು ಯಕ್ಷಗಾನ ಪ್ರಸಂಗ ಪ್ರದರ್ಶನಗಳು ಇರುತ್ತವೆ. ಸಾಯಂಕಾಲ 4.00 ಗಂಟೆಯಿಂದ ಸಮಾರೋಪ ಸಮಾರಂಭವೂ ನಡೆಯಲಿದೆ. ಇದೇ ದಿನ ವಿಶೇಷ ಅಕರ್ಷಣೆ ಯಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಪಿಲಿಕುಳ ನಿಸರ್ಗಧಾಮದ ಗುತ್ತಿನ ಮನೆಯ ಅವರಣದಲ್ಲಿ ತುಳುನಾಡ ಸಂಸ್ಕೃತಿ ವೈಭವವನ್ನು ತೋರಿಸುವ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ. 

2 ದಿನಗಳ ಸಂಗಮ ಸಂಭ್ರಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ದಿನಾಂಕ 22-07-2015 ರಿಂದ 24-07-2015 ಈ ಮೂರು ದಿನಗಳಲ್ಲಿ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಶಿಬಿರ ನಡೆಯಲಿದ್ದು, ಇದೇ ಅವಧಿಯಲ್ಲಿ ತುಳು ಸಂಸ್ಕೃತಿಯನ್ನು ಬಿಂಬಿಸುವ ತುಳು ಐಸಿರಿ, ಕೊಂಕಣಿ ಸಂಸ್ಕೃತಿಯನ್ನು ಬಿಂಬಿಸುವ ಕೊಂಕ್ಣಿ ಸಂಭ್ರಮ್ ಬ್ಯಾರಿ ಸಂಸ್ಕೃತಿಯನ್ನು ಬಿಂಬಿಸುವ ಪೆರ್ನಾಲ್ ಸಂದೋಲ ಕಾರ್ಯಕ್ರಮಗಳು ನಡೆಯಲಿವೆ. ದಿನಾಂಕ 24ರಂದು ಸಂಜೆ ಸಂತ ಕವಿ ಕನಕದಾಸರ ಜೀವನ ಪರಿಚಯ ನೀಡುವ ತುಳು,ಕೊಂಕಣಿ ಹಾಗೂ ಬ್ಯಾರಿ ಈ ಮೂರು ಭಾಷೆಗಳಲ್ಲಿ ಅನುವಾದಿತ ಕೃತಿಗಳಾಗಿ ಪ್ರಕಟಿಸಿರುವ ಮೂರು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ.

ಚಿತ್ರಕಲಾ, ಶಿಲ್ಪಕಲೆ, ಕಾವ್ಯ-ಸಾಹಿತ್ಯ-ಪುಸ್ತಕಗಳ ಪ್ರದರ್ಶನ, ಕರಾವಳಿಯ ವಿವಿಧ ಸಾಮಾಜಿಕ ಪಂಗಡದವರ ಅಹಾರ, ತಿಂಡಿತಿನಿಸುಗಳ ಪ್ರದರ್ಶನ, ತುಳು ನಾಡಿನ ಜನಪದ ಹಿನ್ನೆಲೆಯ ಜನಜೀವನದ ಪರಿಚಯ ನೀಡುವ ಸ್ಟಾಲುಗಳು, ಮಳಿಗೆಗಳು ಸಂದರ್ಶಕರ ಅಕರ್ಷ ಣೆಯಾಗಲಿದೆ. 

ವೇದಿಕೆಗಳಲ್ಲಿ ನಿರಂತರವಾಗಿ ಕರ್ನಾಟಕದ ವಿವಿಧ ಅಕಾಡೆಮಿಗಳ ವತಿಯಿಂದ ಅಯೋಜಿಸಲ್ಪಡುವ ಜನಪದ, ಶಾಸ್ತ್ರೀಯ, ಸುಗಮ ಸಂಗೀತ, ನೃತ್ಯ, ರೂಪಕ ನಾಟಕ, ಗೊಂಬೆಯಾಟ,ಯಕ್ಷಗಾನ ಪ್ರಸಂಗ ಉರ್ದು ಗಜಲ್, ಕಥಾರಂಗ, ಬಹುಭಾಷಾ ಕವಿಗೋಷ್ಠಿ, ಸಚಿವರೊಡನೆ ಚರ್ಚೆ, ಅಧ್ಯಕ್ಷರೊಂದಿಗೆ ಆಯ್ದ ಪ್ರತಿನಿಧಿಗಳು ನಾಡು ನುಡಿಯ ಬಗ್ಗೆ ನೇರ ಸಂವಾದ, ಅಲ್ಲದೇ ಇತರ ಹತ್ತಾರು ಮನೋರಂಜನಾ ಕಾರ್ಯಕ್ರಮಗಳು ಸಂಗಮ ಸಂಭ್ರಮವನ್ನು ನೋಡಲು ಬರುವ ಸಾವಿರಾರು ಮಕ್ಕಳು, ಯುವಕರು, ಮಹಿಳೆಯರು ಇತರ ಎಲ್ಲಾ ವಯೋಮಾನದವರಿಗೂ ಹಬ್ಬದ ವಾತಾವರಣ ನಿರ್ಮಾಣವಾಗಿ, ನಮ್ಮ ನಾಡಿನ ಮಳೆಗಾಲದ ಜಡತೆಯನ್ನು ತೆಗೆದು ಮನಸ್ಸಿಗೆ ಮುದ ನೀಡಿ ಖುಶಿ ತುಂಬಲಿ ಎಂದು ಹಾರೈಸೋಣ.

ಉಪಸ್ಥಿತರು: 

ಮಾನ್ಯ ಶ್ರೀ ರೊಯ್ ಕ್ಯಾಸ್ತೆಲಿನೊ, ಅಧ್ಯಕ್ಷರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ

ಮಾನ್ಯ ಶ್ರೀ ಬಿ.ಎ. ಮುಹಮ್ಮದ್ ಹನೀಫ್, ಅಧ್ಯಕ್ಷರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ

ಮಾನ್ಯ ಶ್ರೀಮತಿ ಜಾನಕಿ ಬ್ರಹ್ಮಾವರ, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

ಡಾ.ಬಿ.ದೇವದಾಸ ಪೈ, ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ,

ಶ್ರೀ ಉಮರಬ್ಬ, ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ

ಶ್ರೀ ಬಿ.ಚಂದ್ರಹಾಸ ರೈ, ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

 

ಸಂಗಮ ಸಂಭ್ರಮ 2015 ವಿಶೇಷ ಆಕರ್ಷಣೆ

ಪಿಲಿಕುಳ ನಿಸರ್ಗಧಾಮದಲ್ಲಿ ಸಂಗಮ ಸಂಭ್ರಮ ನಡೆಯುವ ಸ್ಥಳದಲ್ಲಿ ವಿವಿಧ ಮಳಿಗೆದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಸಾಂಪ್ರದಾಯಿಕ ತಿಂಡಿ ತಿನಸುಗಳು, ಊಟೋಪಚಾರ, ಉಡುಗೆ-ತೊಡುಗೆ-ಅಲಂಕಾರಿಕ ವಸ್ತುಗಳು, ಸಾವಯವ, ಕೃಷಿ, ನರ್ಸರಿ, ಮನೆಮದ್ದು, ಆಯುರ್ವೇದ, ಖಾದಿ-ಗ್ರಾಮೋದ್ಯೋಗ, ನರ್ಸರಿ ಗಿಡಗಳು ಇತ್ಯಾದಿ ಮಳಿಗೆಗಳಿಗೆ ಅವಕಾಶವಿದೆ. ಆಸಕ್ತರು 1. ಡಾ. ನಿತಿನ್ (9686673237) ಪಿಲಿಕುಳ ನಿಸರ್ಗಧಾಮ ಕಛೇರಿ, ಅಥವಾ 2. ಲಾರೆನ್ಸ್ ಡಿಸೊಜಾ (9739789770) ಸದಸ್ಯರು ಕೊಂಕಣಿ ಅಕಾಡೆಮಿ ಇವರನ್ನು ಸಂಪರ್ಕಿಸಬಹುದು. 

ರಾಜ್ಯದ ವಿವಿಧ ಅಕಾಡೆಮಿಗಳಾದ ಸಾಹಿತ್ಯ, ನಾಟಕ, ಲಲಿತಕಲೆ, ಶಿಲ್ಪಕಲೆ, ಯಕ್ಷಗಾನ, ಸಂಗೀತ ನೃತ್ಯ, ಜಾನಪದ, ಮತ್ತು ಭಾಷಾ ಅಕಾಡೆಮಿಗಳಾದ ಕೊಂಕಣಿ, ತುಳು, ಬ್ಯಾರಿ, ಕೊಡವ, ಅರೆಭಾಷೆ, ಉರ್ದು ಇವುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿರುತ್ತವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು.