ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕೊಂಕಣಿ ಮಾತೃಭಾಷಿಕ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ, ವಿವಿಧ ಕಾರಣಗಳನ್ನು ನೀಡಿ ಕೊಂಕಣಿ ಕಲಿಯುವವರ ಸಂಖ್ಯೆ ಹೆಚ್ಚಳವಾಗುತ್ತಿಲ್ಲ. ಈ ಬಗ್ಗೆ ಸ್ಪಲ್ಪ ಅಬ್ಬರದ ಪ್ರಚಾರ ಮಾಡಿ ಕೊಂಕಣಿ ಜನರನ್ನು ಮಾತೃಭಾಷೆ ಕಲಿಕೆ ಕಡೆ ಆಕರ್ಷಿಸುವ ಸಲುವಾಗಿ ಈ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಕೊಂಕಣಿ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಹೇಳಿದರು. ಅವರು 2.6.2016 ರಂದು ಅಕಾಡೆಮಿ ಸಭಾಂಗಣದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಈ ಮಾಹಿತಿ ನೀಡಿದರು.   

2007 ವರ್ಷದಿಂದ ಕೊಂಕಣಿ ಕಲಿಕೆ ಆರಂಭವಾಗಿದ್ದರೂ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲ ಶಾಲೆಗಳು ಮಾತ್ರ ಕೊಂಕಣಿ ಕಲಿಸುತ್ತಿವೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಈ ಮೂರು ಜಿಲ್ಲೆಯಾದ್ಯಂತ ಸುಮಾರು 50,000  ಕೊಂಕಣಿ ಮಾತೃಭಾಷಿಕ ವಿದ್ಯಾರ್ಥಿಗಳಿದ್ದಾರೆ ಎಂದು ಅಂದಾಜಿದೆ. ಕನ್ನಡ ಅಥವಾ ದೇವನಾಗರಿ ಲಿಪಿಯಲ್ಲಿ ಕೊಂಕಣಿ ಕಲಿಸಲು ಅವಕಾಶ ನೀಡಲಾಗಿದೆ. ಕಳೆದ ಐದು ವರ್ಷಗಳಿಂದ ಹತ್ತನೇ ತರಗತಿಯಲ್ಲಿ ಕೊಂಕಣಿ ಪರೀಕ್ಷೆ ಬರೆಯಲು ಅವಕಾಶವಿದೆ.2015-16 ನೇ ಶೈಕ್ಷಣಿಕ ಸಾಲಿನಲ್ಲಿ 9 ಶಾಲೆಗಳಿಂದ 69 ವಿದ್ಯಾರ್ಥಿಗಳು ಕನ್ನಡ ಲಿಪಿಯಲ್ಲೂ, 3 ಶಾಲೆಗಳ8 ವಿದ್ಯಾರ್ಥಿಗಳು ದೇವನಾಗರಿ ಲಿಪಿಯಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದಿದ್ದಾರೆ. ಹಾಗೂ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಡನೆ ಪಾಸಾಗಿದ್ದಾರೆ.

ಅದೇ ರೀತಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತ ಕಾಲೇಜುಗಳಲ್ಲಿ ಪದವಿಯಲ್ಲಿ ಕೊಂಕಣಿ ಕಲಿಯಲು ಅವಕಾಶ ನೀಡಲಾಗಿದೆ. ಪಾದುವ, ರೊಸಾರಿಯೊ, ಕಿರೆಂ-ಐಕಳ ಹಾಗೂ ಸಂತ ಎಲೋಶಿಯಸ್ (ಸ್ವಾಯತ್ತ) ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೊಂಕಣಿ ಕಲಿಯುತ್ತಿದ್ದಾರೆ. ಪುತ್ತೂರು ಸಂತ ಫಿಲೊಮಿನಾ ಹಾಗೂ ಮಿಲಾಗ್ರಿಸ್ ಹಂಪನಕಟ್ಟೆ ಕಾಲೇಜುಗಳಲ್ಲಿ ಈ ಸಾಲಿನಿಂದ ಕೊಂಕಣಿ ಕಲಿಸಲಾಗುವುದು. 

ಈ ಶೈಕ್ಷಣಿಕ ಸಾಲಿನಿಂದಲೇ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಎಂ.ಎ. ಆರಂಭವಾಗುವ ಎಲ್ಲಾ ಸಾಧ್ಯತೆಗಳಿವೆ. 

ಪಿಯುಸಿಗೆ ಸರಕಾರಿ ಆದೇಶ ನೀಡಲು ಇಲಾಖಾ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಆದರೆ 10ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಈ ಕೆಲಸ ಹಿಂದೆ ಬಿದ್ದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೊಂಕಣಿ ಕಲಿಯುವ ಮಕ್ಕಳ ಸಂಖ್ಯೆ ಏರುಗತಿಯಲ್ಲಿ ಸಾಗದ ಕಾರಣ, ಜೂನ್ 02 ರಿಂದ 16ರವರೆಗೆ ಉಭಯ ಜಿಲ್ಲೆಗಳ ಸುಮಾರು 100 ಶಾಲೆಗಳಿಗೆ ಭೇಟಿ ನೀಡುವ ಸಲುವಾಗಿ ಈ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ. ಶಾಲೆ, ಕಾಲೇಜುಗಳು, ಆಡಳಿತ ಮಂಡಳಿ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಇವರುಗಳನ್ನು ಭೇಟಿ ಮಾಡಿ ಕೊಂಕಣಿ ಕಲಿಕೆ ಬಗ್ಗೆ ಮನವರಿಕೆ ಮಾಡಲಾಗುವುದು. ವಿದ್ಯಾರ್ಥಿಗಳು ಕೊಂಕಣಿ ಕಲಿತರೆ, ಅವರಿಗೆ ಉತ್ತಮ ಅಂಕಗಳು ದೊರೆಯುತ್ತವೆ. ಅದೇ ರೀತಿ ಸರಕಾರವು ಕೊಂಕಣಿ ಕಲಿಕೆಗೆ ಬೇಕಾದ ಎಲ್ಲಾ ಸಹಾಯ ಸಹಕಾರವನ್ನು ನೀಡುತ್ತಿದೆ. ಕೊಂಕಣಿಗರು ಈ ಅವಕಾಶದ ಸದುಪಯೋಗ ಪಡಿಸಿದಲ್ಲಿ, ಮುಂದೆ ಪಿಯುಸಿಯಲ್ಲಿ ಕೊಂಕಣಿ, ಡಿಎಡ್/ಬಿಎಡ್‌ನಲ್ಲಿ ಕೊಂಕಣಿ, ಕೊಂಕಣಿ ಶಿಕ್ಷಕರು ಇತ್ಯಾದಿ ಸವಲತ್ತುಗಳು ದೊರೆಯುತ್ತವೆ. 

ಇದೇ ರೀತಿಯ ಜಾಗೃತಿ ಅಭಿಯಾನವನ್ನು ಕಾರವಾರದಲ್ಲಿ ನಡೆಸಿ 100 ಶಾಲೆಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಮುಂದಿನ ತಿಂಗಳಲ್ಲಿ ಅಲ್ಲಿನ ಕೊಂಕಣಿ ಕಲಿಯುವ ಮಕ್ಕಳ ಬಗ್ಗೆ ಚಿತ್ರಣ ಸ್ಪಷ್ಟವಾಗಲಿದೆ. ಶಾಸಕರು, ಡಿಡಿಪಿಐ, ಬಿಇಒಗಳಿಗೆ ಕೂಡಾ ಮಾಹಿತಿ ನೀಡಲಾಗಿದೆ ಎಂದರು.

ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ, ಅಕಾಡೆಮಿ ಮಾಜಿ ಅಧ್ಯಕ್ಷ ಎರಿಕ್ ಒಝೇರಿಯೊ, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಕೊಂಕಣಿ ಸಾಹಿತಿಗಳು, ಲೇಖಕರು ಹಾಗೂ ಅಕಾಡೆಮಿಯ ಸದಸ್ಯರು ಹಾಜರಿದ್ದರು.

ಕೊಂಕಣಿ ಬಾವುಟ ಹಾರಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]