ಆಗಸ್ಟ್ 18, 2016:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
ಗಿರಿಜನ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆ ೨೦೧೫-೧೬  
ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಜನಪದ ಕಲೆಗಳ ಫೆಲೋಶಿಫ್ ಮತ್ತು ತರಬೇತಿ ಕಾರ್ಯಕ್ರಮ
ಕೊಂಕಣಿ ಜನಪರ-ಜನಪದ ಉತ್ಸವ, ದಾಂಡೇಲಿ
ಯೋಜನೆಯ ಸಂಕ್ಷಿಪ್ತ ವರದಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕರ್ನಾಟಕ ರಾಜ್ಯವ್ಯಾಪ್ತಿಯ ಎಲ್ಲಾ ಕೊಂಕಣಿ ಮಾತೃಭಾಷಿಕರ ಭಾಷಾ ಹಿತಾಸಕ್ತಿ ಹಾಗೂ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿಯುಳ್ಳ ಸಂಸ್ಥೆಯಾಗಿರುತ್ತದೆ.

    ಕಳೆದ ೨೪ ವರ್ಷಗಳಿಂದ ಅಕಾಡೆಮಿಯು ಬಹುಸಮುದಾಯದ ಕೊಂಕಣಿಗಾಗಿ ಸಾಕಷ್ಟು ಕಾರ್ಯಕ್ರಮ ಮಾಡುತ್ತಾ ಬಂದಿದ್ದು ಈ ತನಕ ತಲುಪದೇ ಇದ್ದ ಕೊಂಕಣಿ ಪರಿಶಿಷ್ಟ ವರ್ಗದ ಜನರಿಗಾಗಿ ಈ ಬಾರಿ ಐತಿಹಾಸಿಕವಾಗಿ ಕಲೆಗಳಿಗೆ ಸಂಬಂಧಿಸಿ ಒಂದು ವಿಶೇಷ ಜನಪದ ಅಧ್ಯಯನ-ಫೆಲೋಶಿಪ್-ಯೋಜನೆಯನ್ನು ಕಾರ್ಯಗತಗೊಳಿಸಿರುತ್ತದೆ.

 

 

 

 

 

    ಸರಕಾರದ ಆರ್ಥಿಕ ಸೌಲಭ್ಯಗಳು ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬ ನಮ್ಮ ಕರ್ನಾಟಕ ರಾಜ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಧ್ಯೇಯದೊಂದಿಗೆ, ಮತ್ತು ಹಿರಿಯ ಸಚಿವರಾದ ಶ್ರೀ ಆರ್. ವಿ. ದೇಶಪಾಂಡೆಯವರ ಮಾರ್ಗದರ್ಶನದಲ್ಲಿ, ಇಲಾಖಾ ಸಚಿವರಾದ ಶ್ರೀಮತಿ ಉಮಾಶ್ರೀಯವರ ಉಸ್ತುವಾರಿಯಲ್ಲಿ, ಹಾಗೂ ಅಕಾಡೆಮಿಯ ಅಧ್ಯಕ್ಷರಾಗಿರುವ ಶ್ರೀ ರೊಯ್ ಕ್ಯಾಸ್ತಲಿನೊ ರವರ ಮುಂದಾಳುತ್ವದಲ್ಲಿ ಈ ಸಾಂಸ್ಕೃತಿಕ ಮಹತ್ವವುಳ್ಳ ಫೆಲೋಶಿಪ್ ಯೋಜನೆಯು ಯಶಸ್ವಿಯಾಗಿ ನಡೆದಿದ್ದು ವ್ಯವಸ್ಥಿತ ತರಬೇತಿಯೊಂದಿಗೆ ೩೦೦ ಕಲಾವಿದರು ಸ್ಪೂರ್ತಿ ಪಡೆದು ಇಂದು ನಮ್ಮ ಮುಂದೆ ಇಲ್ಲಿ ನೆರೆದಿದ್ದಾರೆ.

    ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಹುಲುಸ್ವಾರ-ಚಾಮಗಾರ್ ಸಮುದಾಯದವರಿಗಾಗಿ, ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಸಿದ್ಧಿ ಸಮುದಾಯದವರಿಗಾಗಿ, ಎರಡು ಬೇರೆ ಬೇರೆ ಫೆಲೋಶಿಪ್ ಯೋಜನೆಗಳಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಡೆದ ತಲಾ ರೂ. ೧೦ ಲಕ್ಷದ ಅನುದಾನಗಳನ್ನು ಸ್ವೀಕರಿಸಿದ ಅಕಾಡೆಮಿಯು, ತಾನೇ ಸಿದ್ಧಪಡಿಸಿರುವ ಐದು ಹಂತಗಳುಳ್ಳ ಅಧ್ಯಯನ ಪೂರ್ಣ ಯೋಜನೆಯನ್ನು ವಿನ್ಯಾಸಗೊಳಿಸಿ ೬ ತಿಂಗಳ ಅವಧಿಯಲ್ಲಿ, ಎಡೆಬಿಡದೆ ಹತ್ತು ಹಲವು ಚಟುವಟಿಕೆಗಳಾಧರಿತ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿರುತ್ತದೆ.

 

 

 

 

    ಸಾಮಾನ್ಯವಾಗಿ, ಸೀಮಿತ ಶಿಕ್ಷಣವುಳ್ಳ, ಬಡ-ಕಾರ್ಮಿಕ ವರ್ಗದವರೇ ಹೆಚ್ಚಾಗಿರುವ, ಈ ಸಮುದಾಯದ ನಮ್ಮ ಕಲಾವಿದ ಮಿತ್ರರ ಕೈಗೆ, ಹಸಿ ಬಿದಿರಿನ ಕೊರಡುಗಳನ್ನು ನೀಡಿದರೆ ಸಾಕು, ಕೆಲವೇ ಸಮಯದಲ್ಲಿ ಅವುಗಳಿಂದ ಸುಂದರ ನಸು-ಹಳದಿ ಬಣ್ಣದ ಬುಟ್ಟಿ, ಗೆರಸೆ, ಬಾಸ್ಕೆಟ್‌ಗಳು ಸೃಷ್ಟಿಗೊಳ್ಳುತ್ತವೆ. ಚರ್ಮವನ್ನು ಹದಗೊಳಿಸಿ ಸೌಂದರ್‍ಯಯುಕ್ತ ಪಾದರಕ್ಷೆಗಳನ್ನು ಸೃಷ್ಟಿಸುವ ಅಪಾರ ಶಕ್ತಿಯ ಕೌಶಲ್ಯವನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಕಾಡಿನ ಸರಹದ್ದಿನಲ್ಲಿ ವಾಸಿಸಿ, ಅಲ್ಲಿನ ನವಿಲುಗಳನ್ನು ನಾಚಿಸುವ, ಚರ್ಮ ಹೊದಿಸಿದ ಮಡಕೆಗಳನ್ನೇ ವಾದ್ಯ ಪರಿಕರಗಳನ್ನಾಗಿಸಿ, ಮರದೆಲೆಗಳನ್ನೇ ತೊಡುಗೆಯಾಗಿಸಿ, ಕುಣಿಯುವ ಪುಗಡಿ, ಝಕಾಯ್, ಶಿಗ್ಮೊ, ದಫ್ಹ್ ಇತ್ಯಾದಿ ಸುಂದರ ನೃತ್ಯ ಕಲೆಗಳು, ಈ ನಮ್ಮ ದಲಿತ ಬಾಂದವರಲ್ಲಿ ತಲೆ ತಲಾಂತರಗಳಿಂದ ರಕ್ತಗತವಾಗಿ ಸಾಗಿ ಬಂದಿದೆ. ಮುಂದಿನ ದಿನಗಳಲ್ಲಿ ಈ ಅಪರೂಪದ ಕುಲಕಸುಬುಗಳು, ಈ ಅನುಪಮ ಜನಪದ ಹಾಡು ನೃತ್ಯಗಳು, ನಶಿಸಿ ಹೋಗದೆ, ಅವುಗಳನ್ನು ಮೂಲರೂಪದಲ್ಲಿ ಉಳಿಸಿ ಬೆಳೆಸುವ ಅರಿವು ಮೂಡಿಸುವುದೇ ಈ ಫೆಲೋಶಿಪ್ ಯೋಜನೆಗಳ ಉದ್ದೇಶವಾಗಿತ್ತು. ಈ ಗುರಿ ಸಾಧಿಸುವಲ್ಲಿ ನಾವು ಸಾಕಷ್ಟು ಸಫಲರಾಗಿದ್ದೇವೆ ಎಂದು ತಿಳಿಸಲು ಹರ್ಷಪಡುತ್ತೇವೆ.

    ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಪ್ರದೇಶದಾದ್ಯಂತ ಹರಡಿರುವ, ಸಿದ್ಧಿ-ಹುಲುಸ್ವಾರ-ಚಾಮಗಾರ ಸಮುದಾಯದ ಕಲಾವಿದರು, ಅಷ್ಟೇನೂ ಸಾರ್ವಜನಿಕ ಸಭೆ ಸಮಾರಂಭದಲ್ಲಿ ಭಾಗವಹಿಸದ ಮುಗ್ದ ಜನರು.  ಅಂದಂದಿನ ಕೂಳಿಗಾಗಿ ದಿನಾ ಕೂಲಿನಾಲಿ ಮಾಡಿ ಬದುಕುವವರಾಗಿದ್ದಾರೆ.

 

 

 

 

ಫೆಲೋಶಿಪ್ ಯೋಜನೆಗಾಗಿ, ಮೊದಲು ಇವರನ್ನು ತುಂಬಾ ಒತ್ತಾಯದಿಂದ ಕರೆಸಿ ಪ್ರಥಮ ಹಂತದ ಒಂದು ಸಭೆ ನಡೆಸಲಾಯಿತು.  ಈ ಸಭೆಯನ್ನು ಒಂದು ಸಂತಸದ ತಾಣವಾಗಿಸಿ ಕಲಾವಿದರಿಗೆ ಅವರವರ ಕುಲಕಸುಬು, ಜನಪದ ಕಲಾಸಂಪತ್ತಿನ ಬಗ್ಗೆ ಪ್ರಜ್ಞೆ ಬೆಳೆಸಿ, ಈ ಸಂಪತ್ತನ್ನು ಮುಂದಿನ ಪೀಳಿಗೆಯ ಯುವಕರಿಗೆ ಕಲಿಸಿ ವರ್ಗಾಯಿಸುವ ಅಗತ್ಯತೆಯನ್ನು ಮನಗಾಣಿಸಲಾಯಿತು. ಹೀಗೆ ಇವರನ್ನು ಈ ಯೋಜನೆಯಲ್ಲಿ ಒಳಗೊಳ್ಳುವಂತೆ ಮನವೊಲಿಸಿ ಸಫಲರಾದೆವು.

    ಎರಡನೇ ಹಂತದಲ್ಲಿ ಐದು ಪ್ರಾದೇಶಿಕ ವ್ಯಾಪ್ತಿಯಿಂದ ತಲಾ ೧೦ ಮಂದಿ ಉತ್ಸಾಹಿಗಳ ಫೆಲೋಶಿಪ್ ತಂಡ ರಚಿಸಿ, ಇವರಿಗೆ ಎರಡು ದಿನಗಳ ಸನಿವಾಸ ತರಬೇತಿ ಆಯೋಜಿಸಲಾಯಿತು. ಈ ತರಬೇತಿಯಲ್ಲಿ ಆಯಾ ಕಲಾಪ್ರಕಾರ, ಕುಲಕಸುಬುಗಳನ್ನು ಮೂಲರೂಪದಲ್ಲಿ ನಿರೂಪಿಸಿ, ಪ್ರಾತ್ಯಕ್ಷಿಕೆ-ಅಭ್ಯಾಸಗಳನ್ನೊಳಗೊಂಡ ಗಾಢ ತರಬೇತಿ ನೀಡಿ ಎರಡೂ ಯೋಜನೆಯಡಿಯಲ್ಲಿ ೫೦ ಮಂದಿ ಸದಸ್ಯರುಳ್ಳ ಎರಡು ಸಮರ್ಥ ಫೆಲೋಶಿಪ್ ಅಭ್ಯರ್ಥಿ ತಂಡ ರಚಿಸಲಾಯಿತು.  

 

 

 

    ಈ ತಂಡದವರು ಮೂರನೇ ಹಂತದಲ್ಲಿ ತಮ್ಮ ತಮ್ಮ ಪ್ರಾದೇಶಿಕ ಮಟ್ಟದಲ್ಲಿ, ಮುಂದಿನ ಮೂರು ತಿಂಗಳ ಅವಧಿ ಬಳಸಿ, ಸುಮಾರು ೨೪ ಗ್ರಾಮೀಣ ಹಳ್ಳಿ ಪ್ರದೇಶದ ಕೇಂದ್ರಗಳಲ್ಲಿ, ಗುರುಶಿಷ್ಯ ಪರಂಪರೆ ಮಾದರಿಯಲ್ಲಿ, ೬೦ ಗಂಟೆಗಳ ವ್ಯವಸ್ಥಿತ ತರಬೇತಿ ನೀಡಿದರು. ತಮ್ಮ ಕೌಶಲ್ಯಗಳನ್ನು ಆರಂಭಿಕದಲ್ಲಿದ್ದ ೧೦೦ ರ ಸಂಖ್ಯೆಯಿಂದ ೩೦೦ ಕ್ಕೆ ವೃದ್ಧಿಸಿಕೊಂಡರು.  ಇದರ ಫಲವಾಗಿ ಹೊಸದಾಗಿ ೨೦೦ ಮಂದಿ ಯುವಕರು, ಶಾಲಾ ವಿದ್ಯಾರ್ಥಿಗಳು, ಜನಪದ ಕಲಾಭ್ಯಾಸ ಪಡೆದು, ನಶಿಸಿ ಹೋಗುವ ತಮ್ಮ ಕುಲ ಸಂಬಂಧಿ ಕಸುಬು-ಕಲೆಗಳಿಗೆ ಪುನರ್‌ಚೇತನ ನೀಡಿರುತ್ತಾರೆ. ಅಂಕೋಲದ ಹಿಲ್ಲೂರು-ಹಳವಳ್ಳಿ-ಮಳಗಾಂವ; ಶಿರಸಿಯ ವಾನಳ್ಳಿ-ಕೋಟೆಮನೆ; ಮುಂಡಗೋಡದ ಉಗ್ಗಿನಕೇರಿ-ಹಿಲ್ಲೂರು; ಯಲ್ಲಾಪುರದ ಕೊಡಸೆ-ಕಳಾಸಿ; ಕುಮಟಾದ ಹಳಕರೆ; ಹಳಿಯಾಳದ ಗರಡವಳ್ಳಿ-ಕಾಮತಿ ಕೊಪ್ಪ; ಕಾರವಾರದ ಖರ್ಗಾದಂತಹ ಹಳ್ಳಿಗಳಲ್ಲಿನ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿದ ಅಕಾಡೆಮಿ ಅಧ್ಯಕ್ಷರು, ರಿಜಿಸ್ಟ್ರಾರ್‌ನ್ನೊಳಗೊಂಡ ಸಮೀಕ್ಷಾ ತಂಡವು ತರಬೇತಿ ವೀಕ್ಷಿಸಿ ಫೊಟೋ-ವೀಡಿಯೋ ಚಿತ್ರೀಕರಣ ನಡೆಸಿರುತ್ತದೆ.  ಕಲಾವಿದರ ಗುರುಗಳಿಗೆ, ಅಭ್ಯಾಸ ಮಾಡುವ ಯುವ ಅಭ್ಯರ್ಥಿಗಳಿಗೆ, ಗುರು-ಶಿಷ್ಯ ವೇತನ ನೀಡಿ ಪ್ರೋತ್ಸಾಹಿಸಿದ್ದು, ಎಲ್ಲರೂ ತೃಪ್ತಿ ವ್ಯಕ್ತಪಡಿಸಿರುತ್ತಾರೆ.

    ನಾಲ್ಕನೇ ಹಂತದ ಕಾರ್ಯಚಟುವಟಿಕೆಯಾಗಿ ಇಂದು ಈ ಭವ್ಯ ಪ್ರದರ್ಶನ ಸಮಾರಂಭವನ್ನು ಏರ್ಪಡಿಸಲಾಗಿದೆ. ಒಟ್ಟು ೪೦ ತಂಡಗಳಲ್ಲಿ-ಕುಲಕಸುಬು ಸಾಧನಗಳು ಹಾಗೂ ಜನಪದ ನೃತ್ಯ ಪ್ರಕಾರಗಳ ಪ್ರದರ್ಶನ ಹಮ್ಮಿಕೊಂಡಿದ್ದು, ಈ ಎಲ್ಲಾ ತಂಡಗಳಿಗೆ ಪುಗಡಿ, ಧಮಾಮ್, ಬಿದಿರು-ಬೆತ್ತದ ಕೆಲಸಕ್ಕೆ ಅಗತ್ಯವಿರುವ ಕತ್ತಿಯಂತಹ ಸಾಧನಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮದ ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಸಚಿವರಾದ ಶ್ರೀ ಆರ್. ವಿ. ದೇಶಪಾಂಡೆಯವರ ಉಪಸ್ಥಿತಿಯಲ್ಲಿ ನಡೆಸುತ್ತಿರುವುದು, ಈ ಫೆಲೋಶಿಪ್ ಯೋಜನೆಯ ಚಟುವಟಿಕೆಗಳಿಗೆ ಕಳಶಪ್ರಾಯವೆನಿಸಿರುತ್ತದೆ.

 

 

 

 

ಮುಂದೆ ಇಡೀ ಯೋಜನೆಯನ್ನು ಸಾಕ್ಷ್ಯ ಚಿತ್ರ ಹಾಗೂ ಮುದ್ರಿತ ವರದಿಗಳಲ್ಲಿ ಮುಂದಿನ ಐದನೇ ಹಂತದಲ್ಲಿ ಪ್ರಕಟ ಪಡಿಸಲಾಗುವುದು.

    ಹೀಗೆ ಸರಕಾರದ ಈ ವಿಶೇಷ ಯೋಜನೆಯನ್ನು ಮಂಜೂರು ಮಾಡಿರುವ ಇಲಾಖೆಯ ಮಾನ್ಯ ಸಚಿವರು, ಸ್ಥಳೀಯ ಶಾಸಕರು, ಇಲಾಖಾ ಪ್ರಧಾನ ಕಾರ್ಯದರ್ಶಿಯವರು, ನಿರ್ದೇಶಕರು ಹಾಗೂ ಅನುಷ್ಠಾನದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಶ್ರಮಪಟ್ಟ ಅಕಾಡೆಮಿ ಅಧ್ಯಕ್ಷರು, ಸದಸ್ಯರು, ರಿಜಿಸ್ಟ್ರಾರ್, ಕಚೇರಿ ಸಿಬ್ಬಂಧಿಯವರು, ಎಲ್ಲಾ ರೀತಿಯಲ್ಲಿ ಸಹಕರಿಸಿದ ಸಿದ್ಧಿ, ಹುಲುಸ್ವಾರ್, ಚಾಮಗಾರ್ ಸಮುದಾಯದ ಮುಖಂಡರು, ಕಲಾವಿದರಿಗೆ ನಮಿಸುತ್ತಾ ಧನ್ಯವಾದಗಳನ್ನು ಹೇಳುತ್ತೇವೆ.

 

 

 

 

 

 

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]