Print

18.01.2017 ರಂದು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಕೊಂಕಣಿ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಕೊಂಕಣಿ ಲೋಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಪತ್ರಿಕಾ ಗೋಷ್ಟಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ ಮತ್ತು ಬಸ್ತಿ ವಾಮನ ಶೆಣೈ (ಸ್ವಾಗತ ಸಮಿತಿ), ಗೀತಾ ಸಿ ಕಿಣಿ (ಊಟೋಪಚಾರ ಸಮಿತಿ) ಮತ್ತು ವಿಕ್ಟರ್ ಮತಾಯಸ್ (ಕಛೇರಿ ಮತ್ತು ದಾಖಲಾತಿ ಸಮಿತಿ) ಉಪಸ್ಥಿತರಿದ್ದರು.

 

ಕೊಂಕಣಿ ಲೋಕೋತ್ಸವ - 2017 ಕಾರ್ಯಕ್ರಮಗಳ ಬಗ್ಗೆ ಕಿರುನೋಟ:

ಕರ್ನಾಟಕದಲ್ಲಿ ಕೊಂಕಣಿಯ ಭಾಷೆ, ಸಾಹಿತ್ಯ ಸಂಸ್ಕೃತಿಗಳ ಬೆಳವಣಿಗೆಗಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಮಾತೃಭಾಷೆಯ 41 ಸಮುದಾಯದವರ ಸಾಂಸ್ಕೃತಿಕ ಹಿರಿಮೆಯನ್ನು, ಸಾರ್ವಜನಿಕವಾಗಿ ಪ್ರದರ್ಶಿಸಲು ಸಹಾಯವಾಗುವಂತೆ ೨೦೧೭ ರ ಫೆಬ್ರವರಿ ೧೦, ೧೧ ಮತ್ತು ೧೨ ರಂದು ಕೊಂಕಣಿ ಲೋಕೋತ್ಸವ್-೨೦೧೭ ಆಯೋಜಿಸಿದೆ. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಈ ಮೂರು ದಿನಗಳಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಮೂರು ಧರ್ಮಗಳಿಗೆ ಸಂಬಂಧಿಸಿದ ಹಲವು ಸಮುದಾಯದವರ ಜಾನಪದ ಕಲೆಗಳ ವೈವಿಧ್ಯಮಯ ಕಲಾಪ್ರದರ್ಶನಗಳನ್ನು ಪ್ರಸ್ತುತ ಪಡಿಸಲಾಗುತ್ತಿದೆ.

ವೇದಿಕೆಯಲ್ಲಿ ವೈವಿಧ್ಯಮಯ ನೃತ್ಯ ಪ್ರಕಾರಗಳು, ಸಾಹಿತ್ಯ ಸಂವಾದಗಳು, ಕವಿಗೋಷ್ಠಿ, ಕಲಾ ಕುಂಚ ಗಾಯನ, ಸಾಹಿತ್ಯ ವಿಚಾರ ಸಂಕಿರಣಗಳು ನಡೆಯಲಿವೆ.
ಕೊಂಕಣಿ ಮಾತೃಭಾಷಿಕರಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳು, ಸ್ತ್ರೀಯರು, ಯುವಕರು ಮತ್ತು ಪುರುಷರು ಹೀಗೆ ೪ ವಿಭಾಗಗಳಲ್ಲಿ ತಲಾ ಹತ್ತು ಜನರನ್ನು ಗೌರವಿಸಲಾಗುವುದು.

ಕೊಂಕಣಿಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಸಂಪ್ರದಾಯಗಳ ಪ್ರದರ್ಶನ ಮಳಿಗೆಗಳು, ವಿಶಿಷ್ಟ ಮತ್ತು ಸ್ವಾದಿಷ್ಠ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ದಿನಬಳಕೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ.

೨೦೧೭ ಫೆಬ್ರವರಿ ೧೦- ಪ್ರಥಮ ದಿನ ಮಕ್ಕಳ ಮತ್ತು ಮಹಿಳೆಯರ ಉತ್ಸವ

ಹಲವು ರಾಜಕಾರಣಿಗಳ ಹಾಗೂ ಗಣ್ಯಾಥಿಗಣ್ಯರ ಸಮ್ಮುಖದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ರಮಾನಾಥ ರೈ ಇವರಿಂದ ಉದ್ಘಾಟನೆಗೊಳ್ಳಲಿದ್ದು ಹಾಗೂ ಮಾನ್ಯ ಶಾಸಕರಾದ ಶ್ರೀ ಜೆ.ಅರ್.ಲೋಬೊ ಇವರ ಅಧ್ಯಕ್ಷತೆಯಲ್ಲಿ ಲೋಕೋತ್ಸವ ಕಾರ್ಯಕ್ರಮವು ಪ್ರಾರಂಭವಾಗಲಿದೆ. ಈ ದಿನದಂದು ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಪ್ರತಿಭೆಗಳ ಮುಖಾಂತರ ಗುರುತಿಸಿಕೊಂಡಿರುವ ಮಕ್ಕಳನ್ನು ಮತ್ತು ಮಹಿಳೆಯರನ್ನು ಸನ್ಮಾನಿಸಲಾಗುವುದು

೨೦೧೭ ಫೆಬ್ರವರಿ ೧೧ - ಯುವಜನೋತ್ಸವ

ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವರಾದ ಶ್ರೀ ಅರ್.ವಿ.ದೇಶಪಾಂಡೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಂii ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕೊಂಕಣಿ ಜಾನಪದ ಮತ್ತು ಸಂಸ್ಕೃತಿಗಳ ಪ್ರದರ್ಶನದ ವೈಭವಯುತ ಭವ್ಯ ಮೆರವಣಿಗೆಯನ್ನು ಬಲ್ಮಠದ ಮಿಶನ್ ಕಂಪೌಂಡ್ ನಿಂದ ಪುರಭವನದವರೆಗೆ ಏರ್ಪಡಿಲಾಗಿರುತ್ತದೆ. ಈ ಮೆರವಣಿಗೆಯಲ್ಲಿ ಸುಮಾರು ೪೦೦ರಷ್ಟು ಕಲಾವಿದರಿಂದ ವಿವಿಧ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿದೆ.

ಪ್ರಮುಖವಾಗಿ ಸಿದ್ದಿ, ಕುಡ್ಮಿ, ಖಾರ್ವಿ, ಹುಲುಸ್ವಾರ, ಮೇಸ್ತ, ದಾಲ್ದಿ, ಕುಂಬಾರ, ಜಾನಪದ ನೃತ್ಯ ಪ್ರಕಾರಗಳು, ಬ್ರಾಸ್ ಬ್ಯಾಂಡ್, ಚೆಂಡೆ, ಡೊಳ್ಳು, ವಾದ್ಯಗಳ ಪ್ರದರ್ಶನ ಮತ್ತು ವಿವಿಧ ಪ್ರಕಾರಗಳಿಗೆ ಸಂಬಂಧಿಸಿದ ಟ್ಯಾಬ್ಲೊಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಹಲವು ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಈ ಭವ್ಯ ಮೆರವಣಿಗೆಯ ಉದ್ಘಾಟನೆಯನ್ನು ಚಲನಚಿತ್ರ ನಟಿ ಕು.ಎಸ್ತೆರ್ ನೊರೊನ್ಹಾ ಇವರು ನೆರವೇರಿಸಲಿದ್ದಾರೆ.

ಈ ಯುವಜನೋತ್ಸವ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ, ರಸಪ್ರಶ್ನೆ, ಯುವ ಸಾಹಿತ್ಯದ ಬಗ್ಗೆ ಸಂವಾದ, ವಿಚಾರಸಂಕಿರಣ ಕಾರ್ಯಕ್ರಮಗಳು ಜರಗಲಿವೆ. ಹಾಗೂ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಪ್ರಖ್ಯಾತಿ ಹೊಂದಿರುವ ಯುವಜನರನ್ನು ಸನ್ಮಾನಿಸಲಾಗುವುದು.

೨೦೧೭, ಫೆಬ್ರವರಿ ೧೨ - ಸಮಸ್ತ ಕೊಂಕಣಿಗರ ಉತ್ಸವ ಹಾಗೂ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ಕಾರ್ಯಕ್ರಮದೊಂದಿಗೆ ಲೋಕೋತ್ಸವದ ಸಮಾರೋಪ ಕಾರ್ಯಕ್ರಮ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಸ್ತಾಂತರಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಶ್ರೀಮತಿ ಉಮಾಶ್ರೀ ಪುಸ್ತಕ ಬಹುಮಾನ ನೀಡಲಿದ್ದಾರೆ. ಹಲವಾರು ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ದಿನ ಸಮಸ್ತ ಕೊಂಕಣಿಗರ ಸಾಹಿತ್ಯ ಸಾಂಸ್ಕೃತಿಕ ಪ್ರದರ್ಶನಗಳಿಗೆ ಮೀಸಲಿರಿಸಿದೆ. ಕೊಂಕಣಿ ಸಂಘ ಸಂಸ್ಥೆಗಳಿಂದ ಕೊಂಕಣಿಯ ಆಕರ್ಷಕ ನೃತ್ಯಗಳ ಪ್ರದರ್ಶನ. ರಾಜ್ಯದ ವಿವಿಧ ಪ್ರದೇಶಗಳಿಂದ ಆಯ್ದ ಕುಡುಬಿ, ಖಾರ್ವಿ, ಸಿದ್ದಿ, ದಾಲ್ದಿ, ಹಾಗು ಇತರ ಸಮುದಾಯಗಳಿಂದ ಜಾನಪದ ಕಲೆಗಳ ಪ್ರದರ್ಶನ, ಕವಿಗೋಷ್ಠಿ, ಕಾವ್ಯ-ಕುಂಚ ಜಾದೂ, ನಾಟಕ ಪ್ರದರ್ಶನ, ಸಮೂಹ ಗಾಯನ, ಹಾಸ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದೆ.

ಗೌರವ ಪ್ರಶಸ್ತಿ ಕಾರ್ಯಕ್ರಮದ ಅಂಗವಾಗಿ ಪ್ರಶಸ್ತಿ ವಿಜೇತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.