ಕೊಂಕಣಿ ಸಾಹಿತ್ಯದಲ್ಲಿ ಸಿರಿಲ್ ಜಿ ಸಿಕ್ವೇರಾ (ಸಿಜ್ಯೆಸ್ ತಾಕೊಡೆ), ಕಲಾ ವಿಭಾಗದಲ್ಲಿ ಶಿರಸಿಯ ಶ್ರೀ ವಾಸುದೇವ ಬಾಲಕೃಷ್ಣ ಶಾನಭಾಗ್ ಮತ್ತು ಜಾನಪದ ವಿಭಾಗದಲ್ಲಿ ಶ್ರೀಮತಿ ಕ್ಲಾರಾ ಅಂತೋನ್ ಸಿದ್ದಿ, ಯಲ್ಲಾಪುರ ಇವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2016 ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ. 18.01.2017 ರಂದು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಕೊಂಕಣಿ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಈ ಹೆಸರುಗಳನ್ನು ಘೋಷಿಸಿದರು.

 

ಮತ್ತು 2016 ನೇ ಸಾಲಿನ ಪುಸ್ತಕ ಬಹುಮಾನ ಪಡೆದ ಹೆಸರುಗಳನ್ನು ಪ್ರಕಟಿಸಿದರು.
ಅಧ್ಯಯನ ವಿಭಾಗದಲ್ಲಿ - `ಅಮೃತ್ ತುಜ್ಯಾ ಹಾತಿಂ' (ಲೇಖಕರು- ಸಿ ಆಗ್ನೇಸಿಯಾ ಫ್ರ್ಯಾಂಕ್ ಬಿ.ಎಸ್.) ಕವನ ವಿಭಾಗದಲ್ಲಿ - `ಶ್ರೀ ಶ್ರೀನಿವಾಸ ಕಲ್ಯಾಣ' (ಲೇಖಕರು - ಶ್ರೀ ಉಮೇಶ್ ನಾಯಕ್, ಕಾರ್ಕಳ) ಮತ್ತು ಭಾಷಾಂತರ ವಿಭಾಗದಲ್ಲಿ `ಕನ್ನಡಾಚ್ಯೊ ತೀಸ್ ಕಾಣಿಯೊ' - ದೇವನಾಗರಿ ಲಿಪಿ (ಲೇಖಕರು - ಶ್ರೀ ಕಾಸರಗೋಡು ಚಿನ್ನಾ) ಇವರಿಗೆ ಪುಸ್ತಕ ಬಹುಮಾನಗಳು ದೊರೆತಿವೆ. ಸ್ವತಂತ್ರ ತೀರ್ಪುದಾರರ ಸಮಿತಿಯು ಪುಸ್ತಕಗಳ ಆಯ್ಕೆ ನಡೆಸಿದೆ ಎಂದು ತಿಳಿಸಿದರು.

ಗೌರವ ಪ್ರಶಸ್ತಿಯು ರೂ 50,000/- ನಗದು, ಫಲಪುಷ್ಪ, ಸ್ಮರಣಿಕೆ ಮತ್ತು ಪ್ರಮಾಣ ಪತ್ರ ಹಾಗೂ ಪುಸ್ತಕ ಬಹುಮಾನವು ರೂ 25,000/- ನಗದು, ಫಲಪುಷ್ಪ, ಸ್ಮರಣಿಕೆ ಮತ್ತು ಪ್ರಮಾಣ ಪತ್ರ ಒಳಗೊಂಡಿವೆ. ಫೆಬ್ರವರಿ 12 ರಂದು ಪುರಭವನದಲ್ಲಿ ನಡೆಯುವ ಕೊಂಕಣಿ ಲೋಕೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಗೌರವ ಪ್ರಶಸ್ತಿಗಳನ್ನು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಶ್ರೀಮತಿ ಉಮಾಶ್ರೀ ಪುಸ್ತಕ ಬಹಮಾನವನ್ನು ಹಸ್ತಾಂತರಿಸಲಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ ಮತ್ತು ಬಸ್ತಿ ವಾಮನ ಶೆಣೈ (ಸ್ವಾಗತ ಸಮಿತಿ), ಗೀತಾ ಸಿ ಕಿಣಿ (ಊಟೋಪಚಾರ ಸಮಿತಿ) ಮತ್ತು ವಿಕ್ಟರ್ ಮತಾಯಸ್ (ಕಛೇರಿ ಮತ್ತು ದಾಖಲಾತಿ ಸಮಿತಿ) ಉಪಸ್ಥಿತರಿದ್ದರು.

 

ಅಕಾಡೆಮಿ ಗೌರವ ಪ್ರಶಸ್ತಿ ವಿಜೇತರ ಮಾಹಿತಿ:

(೧) ಕೊಂಕಣಿ ಸಾಹಿತ್ಯ - ಸಿರಿಲ್ ಜಿ. ಸಿಕ್ವೇರಾ
ವಯಸ್ಸು : ೬೫
ತಮ್ಮ ೧೨ನೇ ವಯಸ್ಸಿನಲ್ಲಿಯೇ ಬರವಣಿಗೆ ಪ್ರಾರಂಭಿಸಿರುವ ಇವರು ಸುಮಾರು ೫೦ ವರ್ಷಗಳಿಂದ ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಗಳಿಸಿರುತ್ತಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಿಜ್ಯೆಸ್ ತಾಕೊಡೆ ಎಂಬ ಹೆಸರಿನಿಂದ ಗುರುತಿಸುತ್ತಿದ್ದಾರೆ. ಪತ್ತೇದಾರಾಚೆಂ ಸಾಹಸ್, ಖುನ್ಯೆಗಾರಾಚಿ ಖುನ್, ಸಿಸ್ಟರ್ ಶೋಭಾ ಇವರ ಕಾದಂಬರಿಗಳು, ದುಕಾಂ-ಕಥಾ ಸಂಗ್ರಹ, ಇಜ್ಮೊಲಾಚಿ ವಾಟ್ಲಿ ಮತ್ತು ಕುಲ್ಕುಲೊ-ಕಾವ್ಯ ಸಂಗ್ರಹ, ಫುಗೆಟ್ಯೊ, ಫೊಕಣಾಂ, ಗ್ರಹಚಾರ್, ಸುರ್‍ಸೊರ್‍ಯೊ, ಕುಚಿಲ್ಯೊ, ಮಸ್ಕಿರ್‍ಯೊ, ಚಿರ್‌ಮುಲ್ಯೊ, ಹಾಯ್ ಹಾಯ್ ದುಬಾಯ್, ಬುಳ್ಬುಳೆ, ಸುಳ್ಸುಳೆ, ತಾಂಬ್ಡೆಗುಳೆ, ಚೊಕ್ಲೆಟಾಂ ಹಾಸ್ಯ ಸಂಗ್ರಹ, ಭಾಡ್ಯಾಚಿ ಬಾಯ್ಲ್ -ನಾಟಕ, ವೇಕ್‌ಫಿಲ್ಡಾಚೊ ವಿಗಾರ್, ಡೊನ್ ಕ್ವಿಕ್ಸೊಟ್, ಜೀವನ್ ತುಫಾನ್, ಆಬೊಲಿನಾ, ಪೆರಿಸ್-ಅನುವಾದಿದ ಕೃತಿಗಳು, ಇಂಡಿಯಾಚೊ ಆಪೊಸ್ತಲ್, ಆಧುನಿಕ್ ಖುರ್ಸಾವಾಟ್, ಪಿಡೆಸ್ತಾಂಚಿ ಖುರ್ಸಾವಾಟ್ - ಧಾರ್ಮಿಕ ಕೃತಿಗಳು ರವಿ ಅನಿ ಕವಿ, ಉಲೊ ಆನಿ ಝೆಲೊ, ಪಾಂಚ್ ಪಾಕ್ಳ್ಯೊ, ಸಾತ್ ಸಾಳ್ಕಾಂ-ಸಂಪಾದಿತ ಕೃತಿಗಳು ಹೀಗೆ ೨೫ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದು ಪ್ರಕಟಿಸಿರುತ್ತಾರೆ. ಕೊಂಕಣಿ ಪತ್ರಿಕೆಗಳಲ್ಲಿ ಸಂಪಾದಕೀಯ ಕಾರ್ಯ, ಹಲವು ನಾಟಕಗಳಲ್ಲಿ ಹಾಗೂ ಹಾಸ್ಯಮಯ ಪಾತ್ರಗಳಲ್ಲಿ ಅಭಿನಯಿಸಿರುತ್ತಾರೆ. ಇವರ ೫೦೦ಕ್ಕೂ ಮಿಕ್ಕಿದ ಲೇಖನಗಳು ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಕಾಶವಾಣಿಯಲ್ಲಿ ಇವರ ಸಣ್ಣಕಥೆ ಕವಿತೆ ರೂಪಕಗಳು ಪ್ರಚಾರವಾಗುತ್ತಿವೆ. ಮಾತ್ರವಲ್ಲದೇ ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿಯನ್ನು ಪಡೆದಿರುತ್ತಾರೆ.

(೨) ಕೊಂಕಣಿ ಕಲಾ ವಿಭಾಗ : ಶ್ರೀ ವಾಸುದೇವ ಬಾಲಕೃಷ್ಣ ಶಾನಭಾಗ, ಶಿರಸಿ
ವಯಸ್ಸು : ೬೫
ಸುಮಾರು ೪೦ ವರ್ಷಗಳಿಂದ ಕೊಂಕಣಿ ರಂಗಭೂಮಿಯಲ್ಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಇವರು ಭಾವ ಸಂಗಮ, ನಾಟಕ ಸಂಗಮ, ಹಾಸ್ಯಾಂ ಹಾಸೋವ್ಯಾಂ, ಕೊಂಕಣಿ ರಂಗಭೂಮಿ, ಅಮ್ಗೆಲೆ ಶಿರಸಿ, ಕೊಂಕಣಿ ಚಲನಚಿತ್ರಾಂ (ಅನುವಾದ) ದಿನಕರ ದೇಸಾಯಿ, ಭಾವತರಂಗ, ಪುಸ್ತಕಗಳನ್ನು ರಚಿಸಿರುತ್ತಾರೆ ಹಾಗೂ ೨೦ ಕೊಂಕಣಿ ಭಾವಗೀತೆಗಳ ಒಂದು ಆಡಿಯೋ ಸಿ.ಡಿ ಹೊರತಂದಿರುತ್ತಾರೆ. ಇವರ ನೂರಾರು ಲೇಖನಗಳು ಪಂಚ್ಕಾದಾಯಿ, ಸರಸ್ವತಿ ಪ್ರಭಾ, ಜೈಕೊಂಕಣಿ ಮುಂತಾದ ಪತ್ರಗಳಲ್ಲಿ ಪ್ರಕಟವಾಗಿರುತ್ತವೆ. ಉಜ್ವಾಡು ಮತ್ತು ಜೀವನಾಂಚೊ ಖೇಳು ಎಂಬ ಎರಡು ಕೊಂಕಣಿ ಚಲನಚಿತ್ರಗಳಲ್ಲಿ ಅಭಿನಯಿಸಿರುತ್ತಾರೆ. ಚಂದನ ವಾಹಿನಿಯಲ್ಲಿ ಪ್ರದರ್ಶನ ನೀಡಿದ ಕೊಂಕಣಿ ಧಾರವಾಹಿಯಲ್ಲಿ ನಟಿಸಿರುತ್ತಾರೆ. ಕೊಂಕಣಿ ಕಲಾ ಮಂಡಳ ಎಂಬ ಸಂಸ್ಥೆಯನ್ನು ರಚಿಸಿ, ಪ್ರತಿ ವರ್ಷ ಕೊಂಕಣಿ ನಾಟಕ ಶಿಬಿರಗಳನ್ನು ಏರ್ಪಡಿಸಿ, ಕೊಂಕಣಿ ರಂಗಕಲಾವಿದರುಗಳಿಗೆ ಪ್ರೋತ್ಸಾಹನೀಡುತ್ತ ಬರುತ್ತಿದ್ದಾರೆ. ಅಕಾಶವಾಣಿ, ದೂರದರ್ಶನದ ಕಲಾವಿದರಾಗಿ ಕಾರ್ಯಕ್ರಮ ನೀಡಿರುತ್ತಾರೆ.

(೩)ಕೊಂಕಣಿ ಜಾನಪದ : ಶ್ರೀಮತಿ ಕ್ಲಾರ ಅಂತೋನ್ ಸಿದ್ದಿ, ಯಲ್ಲಾಪುರ
ವಯಸ್ಸು : ೬೫
ಪರಿಶಿಷ್ಟ ಪಂಗಡಕ್ಕೆ ಸೇರಿದ ಕೊಂಕಣಿ ಸಿದ್ದಿ ಸಮುದಾಯದವರಾದ ಶ್ರೀಮತಿ ಕ್ಲಾರ ಸಿದ್ದಿ ಇವರು ತಮ್ಮ ಸಮುದಾಯಕ್ಕೆ ಸೇರಿದ ಜಾನಪದ ಹಾಡುಗಳನ್ನು ಹಾಡುವುದರೊಂದಿಗೆ ನೃತ್ಯ ಪ್ರದರ್ಶನ ನೀಡುತ್ತ ಬರುತ್ತಿದ್ದಾರೆ. ಗಿರಿಜನ ಉಪಯೋಜನೆಯಡಿ ಅಕಾಡೆಮಿಯು ಅಯೋಜಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುತ್ತಾರೆ. ಹಲವು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಸಿದ್ದಿ ಜಾನಪದ ನೃತ್ಯ ಪ್ರದರ್ಶನವನ್ನು ನೀಡಿರುತ್ತಾರೆ. ಅಂಗವಿಕಲತೆಯನ್ನು ಮರೆತು ಜನಪದವನ್ನು ಮುಂದಿನ ಪಿಳಿಗೆಗಾಗಿ ಉಳಿಸಿಕೊಂಡು ಹೊಗುವಂತೆ ಯುವಪಿಳಿಗೆಗೆ ಕಲಿಸುತ್ತ ಬಂದಿರುತ್ತಾರೆ.

 

Clara Siddi

 

Cyril G Sequeira

 

Kasaragodu Chinna

 

 

Sr Agnesia

Umesh Nayak

Vasudeva Sirsi

೨೦೧೬ ಪುಸ್ತಕ ಬಹುಮಾನ ಪಡೆದ ಕೃತಿಗಳು
ಭಾಷಾಂತರ : ಕನ್ನಡಾಚ್ಯೊ ತೀಸ ಕಾಣಿಯೊ (ದೇವನಾಗರಿ ಲಿಪಿ)      ಲೇಖಕರು: ಶ್ರೀ ಕಾಸರಗೋಡು ಚಿನ್ನಾ
ಕನ್ನಡದಿಂದ ಕೊಂಕಣಿಗೆ ಭಾಷಾಂತರಿಸಿದ ಈ ಕೃತಿಯಲ್ಲಿ ಸುಮಾರು ೩೦ ಹೆಸರಾಂತ ಕನ್ನಡ ಸಾಹಿತಿಗಳ ಕಥೆಗಳನ್ನು ಒಳಗೊಂಡಿರುತ್ತದೆ. ಲೇಖಕರು ರಂಗಭೂಮಿಯಲ್ಲಿ ಹೆಸರುವಾಸಿಯಾಗಿರುವುದು ಮಾತ್ರವಲ್ಲದೇ, ಸುಮಾರು ೯ ಕೃತಿಗಳನ್ನು ಕನ್ನಡ, ಮಾಲಯಾಳಂ ಮತ್ತು ಬಂಗಾಳಿ ಭಾಷೆಗಳಿಂದ ಕೊಂಕಣಿಗೆ ಭಾಷಾಂತರಿಸಿರುತ್ತಾರೆ. ಕೊಂಕಣಿ ರಂಗಭೂಮಿ, ಚಲನಚಿತ್ರಗಳಲ್ಲಿ ಮಾತ್ರವಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿಯೂ ಹೆಸರುಗಳಿಸಿರುತ್ತಾರೆ. ರೆಡಿಯೊ ಬಿ-ಹೈಗ್ರೇಡ್ ಕಲಾಕಾರಾಗಿ ಗುರುತಿಸಿಕೊಂಡಿರುತ್ತಾರೆ. ಕೇರಳ ಸಂಗೀತ ನಾಟಕ ಅಕಾಡೆಮಿ, ಕೇರಳ ರಾಜೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಮತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭ್ಯವಾಗಿವೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದಾರೆ.

ಅಧ್ಯಯನ ಕೃತಿ: ಅಮೃತ್ ತುಜ್ಯಾ ಹಾತಿಂ (ಲೇಖಕರು- ಸಿ ಆಗ್ನೇಸಿಯಾ ಫ್ರ್ಯಾಂಕ್ ಬಿ.ಎಸ್.)
ಸಿ.ಆಗ್ನೇಸಿಯಾ ಫ್ರ್ಯಾಂಕ್ ಇವರು ಭೆಥನಿ ಸಂಸ್ಥೆಗೆ ಸೇರಿದವರಾಗಿದ್ದು, ೩೦ ವರ್ಷ ಜಾತಿ ಮತ ಎಣಿಸದೆ ಸಮಾಜ ಸೇವೆ ಮಾಡಿ, ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಹಲವಾರು ಸಮಾಜಸೇವಕರನ್ನು ಹುಟ್ಟುಹಾಕಿರುವಂತ ಪ್ರತಿಭಾವಂತರು, ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಕಡುಬಡವರ ಅರ್ಥಿಕ ಪರಿಸ್ಥಿತಿಯನ್ನು ಮನಗಂಡು ಗಿಡಮೂಲಿಕೆಗಳ ಬಳಕೆಯಿಂದ ಆರೋಗ್ಯ ಪಡೆಯುವ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಉಪಯೋಗವಾಗಲು ಹಲವಾರು ಲೇಖನಗಳನ್ನು ಪತ್ರಿಕೆಗಳಲ್ಲಿ ಬರೆದು ಪ್ರಕಟಿಸಿರುತ್ತಾರೆ. ಮಾತ್ರವಲ್ಲದೇ ಹಲವು ಶಿಬಿರಗಳನ್ನು ನಡೆಸಿರುತ್ತಾರೆ. ಆರೋಗ್ಯ ಕಾಪಾಡುವ ಬಗ್ಗೆ ಔಷಧಿಯುಕ್ತ ಗಿಡಮೂಲಿಕೆಗಳ ಬಳಕೆ ಬಗ್ಗೆ ಬರೆದಿರುವ ಈ ಪುಸ್ತಕ ಇವರ ಎರಡನೇ ಪುಸ್ತಕವಾಗಿದೆ.

ಕಾವ್ಯ : ಶ್ರೀ ಶ್ರೀನಿವಾಸ ಕಲ್ಯಾಣ           ಲೇಖಕರು : ಶ್ರೀ ಅಷ್ಟಾವಧಾನಿ ಉಮೇಶ್ ಗೌತಮ ನಾಯಕ್
ಶ್ರೀಯುತರು ಕನ್ನಡ ಹಿಂದಿ ಮತ್ತು ಕೊಂಕಣಿ ಭಾಷೆಗಳಲ್ಲಿ ನೂರ ಒಂದು ಅವಧಾನಗಳನ್ನು ಮಾಡಿರುತ್ತಾರೆ. ಕಾವ್ಯ ಕಥೆ ಕಾದಂಬರಿಗಳ ರಚನೆ ಲೇಖನ ಗಾಯನ, ಸಂಗೀತ ಬೋಧನೆ, ಸಂಗೀತ ನಿರ್ದೇಶನ, ಗಮಕ, ಕಥಾ ಕೀರ್ತನ, ಯಕ್ಷಗಾನ, ನರ್ತನ, ಅಭಿನಯ, ನಾಟಕ ರಚನೆ, ನಿರ್ದೇಶನ, ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡದ ಹೆಚ್ಚಿನ ಕಾವ್ಯಗಳ ಸಂಪೂರ್ಣ ವಾಚನ ಮತ್ತು ವಾಖ್ಯಾನ ನಡೆಸಿದ್ದಾರೆ. ಇವರ ಈ ಕಾವ್ಯವು ಸಾಂಪ್ರದಾಯಿಕ ಮಹಾಕಾವ್ಯ ಪ್ರಕಾರಕ್ಕೆ ಸೇರಿದಾಗಿದೆ. ೨೫ಕ್ಕೂ ಹೆಚ್ಚು ಸುಗಮ ಸಂಗೀತ ತರಬೇತಿ ಶಿಬಿರಗಳನ್ನು ನಡೆಸಿರುತ್ತಾರೆ. ಟಿ.ವಿ. ಧಾರವಾಹಿಗಳು ಹಾಗೂ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಹಿನ್ನೆಲೆ ಗಾಯನ ಮಾಡಿರುತ್ತಾರೆ. ಅಲ್ಲದೇ ಲೇಖಕರು ತಮ್ಮ ಮಹಾಕಾವ್ಯಕ್ಕೆ ಅಚ್ಚಗನ್ನಡದ ಪ್ರಾಚೀನಚ್ಛಂದಸ್ಸಾದ ಪಿರಿಯಕ್ಕರವನ್ನು ಬಳಸುವ ಮೂಲಕ ಕನ್ನಡ ಮತ್ತು ಕೊಂಕಣಿಗೆ ಸೊಗಸಾದ ಸಾರಸ್ವತ ಸಂಬಂಧವನ್ನು ಕಲ್ಪಿಸಿದ್ದಾರೆ.

 

ತೀಸ ಕಾಣಿಯೊ

ಅಮೃತ್ ತುಜ್ಯಾ ಹಾತಿಂ

ಶ್ರೀ ಶ್ರೀನಿವಾಸ ಕಲ್ಯಾಣ

 

 

Comments powered by CComment

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]